ಪುತ್ತೂರು: ಪ್ರೀತಿಸುತ್ತಿದ್ದ ಯುವಜೋಡಿಯೊಂದನ್ನು ಪೊಲೀಸರು ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದ ವಿಚಾರ ತಿಳಿದು ಎರಡೂ ಕಡೆಯವರು ಠಾಣೆಯ ಬಳಿ ಜಮಾಯಿಸಿದ್ದ ಘಟನೆ ಜು.18ರಂದು ಪುತ್ತೂರು ಗ್ರಾಮಾಂತರ ಠಾಣೆಯ ಬಳಿ ನಡೆದಿದೆ.
ಬಲ್ನಾಡಿನ ಮುಸ್ಲಿಂ ಸಮುದಾಯದ ಯುವತಿಯೋರ್ವರು ಅಳಕೆಮಜಲು ನಿವಾಸಿಯಾಗಿರುವ ತನ್ನದೇ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ಎರಡು ದಿನಗಳ ಹಿಂದೆ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ಪೋಷಕರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣವೂ ದಾಖಲಾಗಿತ್ತು.
ನಾಪತ್ತೆಯಾಗಿರುವ ಯುವತಿಯ ಹುಡುಕಾಟ ನಡೆಸಿದ್ದ ಪೊಲೀಸರು, ಯುವತಿಯು ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮಂಗಳೂರು ಸಮೀಪದ ಕೊಣಾಜೆಯಲ್ಲಿ ಇರುವುದನ್ನು ಜು.18ರಂದು ಪತ್ತೆ ಮಾಡಿ ಅವರಿಬ್ಬರನ್ನೂ ಸಂಪ್ಯ ಠಾಣೆಗೆ ಕರೆತಂದಿದ್ದರು. ವಿಚಾರ ತಿಳಿದು ಎರಡೂ ಕಡೆಯಿಂದಲೂ ಆಗಮಿಸಿದ್ದ ಜನ ಠಾಣೆಯ ಬಳಿ ಜಮಾಯಿಸಿದ್ದರು.
ಯುವತಿ ಮತ್ತು ಯುವಕನ ಕಡೆಯ ಕೆಲ ಪ್ರಮುಖರ ಉಪಸ್ಥಿತಿಯಲ್ಲಿ ಠಾಣೆಯಲ್ಲಿ ಮಾತುಕತೆ ನಡೆಸಲಾಯಿತಾದರೂ, ತನ್ನ ಪೋಷಕರೊಂದಿಗೆ ಮನೆಗೆ ಹೋಗಲು ನಿರಾಕರಿಸಿದ ಯುವತಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಹೋಗುವುದಾಗಿ ಪಟ್ಟು ಹಿಡಿದ ಪರಿಣಾಮ ಪೊಲೀಸರು ಆಕೆಯನ್ನು ಯುವಕನೊಂದಿಗೆ ಕಳುಹಿಸಿಕೊಟ್ಟರು.
ಬಳಿಕ ಎರಡೂ ಕಡೆಯವರೂ ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

























