ಪುತ್ತೂರು: ಪುರುಷರಕಟ್ಟೆ–ಶಾಂತಿಗೋಡು–ಆನಡ್ಕ ಸಂಪರ್ಕ ರಸ್ತೆಯು ಮಾಯಂಗಲದಿಂದ ಕೂಡುರಸ್ತೆಯವರೆಗೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ತಕ್ಷಣ ದುರಸ್ತಿಪಡಿಸಿ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜುಲೈ 23ರಂದು ಪುತ್ತೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಟ್ರಸ್ಟ್‌ನ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ವಿಶ್ವನಾಥ ಬಲ್ಯಾಯ, ಜಯರಾಮ ಪೂಜಾರಿ, ಲಕ್ಷ್ಮೀಪ್ರಸಾದ್ ಆನಾಜೆ, ಅವಿನಾಶ್ ಪುರುಷರಕಟ್ಟೆ ಹಾಗೂ ರಾಕೇಶ್ ಓಜಾಲ ಉಪಸ್ಥಿತರಿದ್ದರು.
ಮನವಿಗೆ ತಕ್ಷಣ ಸ್ಪಂದಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಸಂಬಂಧಿತ ಗ್ರಾಮದ ಪಿಡಿಒ ಅವರನ್ನು ರಸ್ತೆ ಸ್ಥಳಕ್ಕೆ ಪರಿಶೀಲನೆಗಾಗಿ ಕಳುಹಿಸಿದರು. ಸ್ಥಳದಲ್ಲಿ ಪುತ್ತಿಲ ಪರಿವಾರದ ನಿಯೋಗ ಹಾಗೂ ಗ್ರಾಮಸ್ಥರು ಪಿಡಿಒ ಅವರಿಗೆ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗಿಸುವಂತೆ ಒತ್ತಾಯಿಸಿದರು.
ಪರಿಶೀಲನೆ ನಡೆಸಿದ ಪಿಡಿಒ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಂಡು ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.



























