ವಿಟ್ಲ: ನೀಟ್ ಹೋರಾಟವನ್ನು ಅವಹೇಳನ ಮಾಡುವ ಹಾಗೂ ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಉದ್ದೇಶದ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಡಿ ವಿಟ್ಲ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ, ಪ್ರಕರಣದ ದೂರುದಾರರು KFC KHANDIGA ಎಂಬ ವಾಟ್ಸಾಪ್ ಗುಂಪಿನ ಸದಸ್ಯರಾಗಿದ್ದು, ಜುಲೈ 23, 2026ರಂದು ಗುಂಪಿನಲ್ಲಿ ಬಂದಿದ್ದ ಸ್ಕ್ರೀನ್‌ಶಾಟ್‌ನ್ನು ಪರಿಶೀಲಿಸಿದ ವೇಳೆ, ಅದರಲ್ಲಿ ಧಾರ್ಮಿಕವಾಗಿ ಪ್ರಚೋದನಕಾರಿ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ರೀತಿಯ ಬರಹಗಳಿರುವುದು ಕಂಡುಬಂದಿದೆ.
ಹೆಚ್ಚಿನ ಪರಿಶೀಲನೆಯಲ್ಲಿ, ಬಂಟ್ವಾಳದ ಕೇಪು ನಿವಾಸಿ ಭರತ್ (36) ಅವರು ಅದೇ ಬರಹವನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ನೀಡಲಾದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 160/2026 ದಾಖಲಿಸಲಾಗಿದೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)–2023ರ ಕಲಂ 197(1)(a), 197(1)(c) ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದ್ದು, ಭರತ್ ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



























