ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಐದೂವರೆ ಕೋಟಿ ರೂ. ಮೌಲ್ಯದ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರ ತನಿಖೆ ವೇಗ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿ ಹೆಸರು ಕೇಳಿಬಂದಿರುವ ಬೆಳ್ತಂಗಡಿ ತಾಲೂಕಿನ ಜಲೀಲ್ @ ಬಾಬಾ (42) ಎಂಬಾತ ಬಂಧನದ ಭೀತಿಯಿಂದ ದೇಶದಿಂದ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ವಾಹನದ ಮೂಲಕ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು, ಈ ಜಾಲದಲ್ಲಿ ಭಾಗಿಯಾಗಿದ್ದವರನ್ನು ಒಬ್ಬೊಬ್ಬರಾಗಿ ಬಂಧಿಸಿದ್ದರು. ತನಿಖೆ ವಿಸ್ತರಿಸಿದಂತೆ ಬೆಳ್ತಂಗಡಿ ಮೂಲದ ಜಲೀಲ್ @ ಬಾಬಾ ಎಂಬಾತ ಈ ಜಾಲಕ್ಕೆ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಡ್ರಗ್ಸ್ ಪೆಡ್ಡಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ಮಾಹಿತಿ ಲಭಿಸಿದೆ.
10 ದಿನದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿಸಿಬಿ ಪೊಲೀಸರು ತನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಿರುವುದು ಗೊತ್ತಾದ ಬೆನ್ನಲ್ಲೇ ಜಲೀಲ್ ಕಳೆದ 10 ದಿನಗಳಿಂದ ತಲೆಮರೆಸಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ತನ್ನ ಬಳಿಯಿದ್ದ ಎರಡು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಈ ಮಧ್ಯೆ ತನ್ನ ಆಪ್ತ ಗೆಳೆಯರ ಸಹಾಯ ಪಡೆದ ಆರೋಪಿ, ಜುಲೈ 25 ರಂದು ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ವಿಮಾನದಲ್ಲಿ ಪರಾರಿಯಾಗಿದ್ದಾನೆ ಎಂದು ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿದೆ.
ಪೊಲೀಸರ ಮುಂದಿನ ಕ್ರಮಆರೋಪಿ ವಿದೇಶಕ್ಕೆ ಪರಾರಿಯಾಗಿರುವ ವಿಚಾರ ತಿಳಿದ ಕೂಡಲೇ ಮಂಗಳೂರು ಸಿಸಿಬಿ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆರೋಪಿಯ ಪಾಸ್‌ಪೋರ್ಟ್ ವಿವರಗಳನ್ನು ಸಂಗ್ರಹಿಸಿ, ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇಂಟರ್‌ಪೋಲ್ ಮೂಲಕವೂ ಆರೋಪಿಯನ್ನು ಪತ್ತೆ ಹಚ್ಚಿ ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಬೆಳ್ತಂಗಡಿಯಲ್ಲಿ ಆರೋಪಿಯ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಜಾಲದ ಹಿಂದಿರುವ ಇತರ ಸದಸ್ಯರ ಪತ್ತೆಗೂ ಬಲೆ ಬೀಸಿದ್ದಾರೆ.


























