ವಿಟ್ಲ: ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಇಬ್ಬರಿಂದ ಹಣ ಪಡೆದು, ಉದ್ಯೋಗ ಕೊಡಿಸದೇ ಹಾಗೂ ಹಣವನ್ನೂ ಹಿಂದಿರುಗಿಸದೆ ವಂಚಿಸಿದ ಪ್ರಕರಣದಲ್ಲಿ ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಬಲ್ಯ ನಿವಾಸಿ ಹಿಬ್ಬಾತುಲ್ಲ (52) ಬಂಧಿತ ಆರೋಪಿ. ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 151/2011, ಕಲಂ 420, 465, 468, 471 ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಹಿಬ್ಬಾತುಲ್ಲನನ್ನು ಅ.5ರಂದು ವಿಟ್ಲ ಠಾಣಾ ಸಿಬ್ಬಂದಿಗಳಾದ ಶಿವಾನಂದ ಮಡ್ಡಿ, ಶಿದ್ದಪ್ಪ ಹಾಗೂ ಯಂಕಪ್ಪ ಅವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


























