ಪುತ್ತೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅ.ಕ್ರ. 59/2013, ಕಲಂ 394 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಮೇಲ್ಮನವಿ ಬಳಿಕ ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಸುಭಾಷ್ ನಗರ ನಿವಾಸಿ ಮೊಹಮ್ಮದ್ ಮುಸ್ತಾಫ @ ಮುಸ್ತಾಫ (36) ಎಂಬಾತನ ವಿರುದ್ಧ ಕರ್ನಾಟಕ ಹೈಕೋರ್ಟ್ ಬೆಂಗಳೂರಿನಲ್ಲಿ ಕ್ರಿಮಿನಲ್ ಅಪೀಲ್ ನಂ.602/2015 ದಾಖಲಾಗಿತ್ತು. ಆದರೆ ಅಪೀಲು ಸಲ್ಲಿಸಿದ ಬಳಿಕ ಆತ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಆರೋಪಿಯ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಅ.6ರಂದು ಬೆಳಗ್ಗೆ ದೊರೆತ ಮಾಹಿತಿ ಆಧರಿಸಿ ಪೊಲೀಸರು ನೆಕ್ಕಿಲಾಡಿಯಲ್ಲಿರುವ ಆತನ ಪ್ರಸ್ತುತ ವಿಳಾಸಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ವಿಜಯ ಕ್ರಾಂತಿ ಅವರ ನಿರ್ದೇಶನದಂತೆ, ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಡಿ.ಆರ್. ಮಂಜಪ್ಪ ಅವರ ನೇತೃತ್ವದಲ್ಲಿ ಪಿಎಸ್‌ಐ ಅರುಣ್ ಕುಮಾರ್ ಡಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಯ ಸಹಕಾರವೂ ದೊರಕಿತು.



























