ವಿಟ್ಲ: ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆಯ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಟ್ಲ ಪಡೂರು ಗ್ರಾಮದ ಕಡಂಬು ನಿವಾಸಿ, ಮೇಸ್ತ್ರಿ ವೃತ್ತಿಯ ರಾಮಣ್ಣ ಮೂಲ್ಯ (45) ಗಾಯಗೊಂಡವರು.
ರಾಮಣ್ಣ ಮೂಲ್ಯ ಅವರು ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ ಆಕ್ಟಿವಾದಲ್ಲಿ ತೆರಳುತ್ತಿದ್ದಾಗ, ಬೊಲ್ಪಾದೆಯ ಅಪಾಯಕಾರಿ ತಿರುವಿನ ಏರು ರಸ್ತೆಯಲ್ಲಿ ಎದುರಿನಿಂದ ಬಂದ ಮಾರುತಿ ಕಾರು ಆಕ್ಟಿವಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸಂಪೂರ್ಣ ಜಖಂಗೊಂಡಿದ್ದು, ರಾಮಣ್ಣ ಮೂಲ್ಯ ಅವರ ಬಲಗೈ ಮೂಳೆ ಮುರಿದಿದೆ. ಡಿಕ್ಕಿಯ ಬಳಿಕ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.ಸ್ಥಳೀಯರು ತಕ್ಷಣ ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.



























