ನವದೆಹಲಿ: ಬಾಹ್ಯಾಕಾಶಕ್ಕೆ ಟೂರ್ ಹೋಗಿಬರುವುದು ಇಲ್ಲಿಯವರೆಗೆ ಕನಸಾಗಿಯಷ್ಟೇ ಉಳಿದಿತ್ತು. ಆದ್ರೆ ಈ ಕನಸನ್ನ ಬ್ರಿಟನ್ನ ಖ್ಯಾತ ಉದ್ಯಮಿ ರಿಚರ್ಡ್ ಬ್ರಾನ್ಸನ್ ನಿಜವಾಗಿಸಿದ್ದಾರೆ. ತಮ್ಮ ಒಡೆತನದ ವರ್ಜಿನ್ ಗ್ಯಾಲಕ್ಟಿಕ್ ಸ್ಪೇಸ್ ಫ್ಲೈಟ್ ಕಂಪನಿಯಿಂದ ತಯಾರಿಸಲ್ಪಟ್ಟ ವಿಎಸ್ಎಸ್ ಯುನಿಟಿ ರಾಕೆಟ್ ಸ್ಪೇಸ್ನ ಅಂಚನ್ನು ತಲುಪಿ ಈಗ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿದೆ.
ರಿಚರ್ಡ್ ಬ್ರಾನ್ಸನ್ ಜೊತೆ ಆಂಧ್ರದ ಗುಂಟೂರು ಮೂಲದ ಸಿರೀಶಾ ಬಾಂಡ್ಲಾ ಸೇರಿದಂತೆ ತನ್ನ ಕಂಪನಿಯ ಮೂವರು ಉದ್ಯೋಗಿಗಳು ಮತ್ತು ಇಬ್ಬರು ಪೈಲೆಟ್ಗಳು ವಿಎಸ್ಎಸ್ ಯುನಿಟಿ ಗಗನ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಈ ರಾಕೆಟ್ ಸುರಕ್ಷಿತವಾಗಿ ಪ್ರಯಾಣ ಬೆಳೆಸಲೆಂದು ಇಡೀ ಪ್ರಪಂಚವೇ ಕಾಯುತ್ತಿತ್ತು. ಇದೀಗ ಇಡೀ ತಂಡ ಸೇಫ್ ಆಗಿ ಭೂಮಿಗೆ ಬಂದು ಲ್ಯಾಂಡ್ ಆಗಿದ್ದಾರೆ.
ವಿಎಸ್ಎಸ್ ಯುನಿಟಿ ಒಂದು ರಾಕೆಟ್. ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ಈ ರಾಕೆಟ್ ಅನ್ನು ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯಿಂದ ತಯಾರಿಸಲಾಗಿದೆ. ಈ ವಿಎಸ್ಎಸ್ ಯುನಿಟಿ ಬಿಳಿ ಬಣ್ಣವನ್ನು ಹೊಂದಿದೆ. ಇದಕ್ಕೆ ರಿಚರ್ಡ್ ಬ್ರಾನ್ಸನ್ ತನ್ನ ತಾಯಿ ಹೆಸರು VMS Eve ಎಂದು ನಾಮಕರಣ ಮಾಡಿದ್ದರು. ಈ VMS Eve ರಾಕೆಟ್ ಸುಮಾರು 85 ಕಿಲೋ ಮೀಟರ್ ಎತ್ತರದಲ್ಲಿ ಸುಮಾರು 90 ನಿಮಿಷಗಳ ಕಾಲ ಹಾರಲಿದೆ ಎಂದು ಈಗ ತಿಳಿದು ಬಂದಿದೆ. 34 ವರ್ಷದ ಆಂಧ್ರದ ಮೂಲದ ಸಿರೀಶಾ ಬಾಂದ್ಲಾ ಏರೋನಾಟಿಕಲ್ ಎಂಜಿನಿಯರ್. ಈ ರಾಕೆಟ್ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.