ಮಂಗಳೂರು: ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೋರ್ವರು ಆರು ಮಂದಿ ರೋಗಿಗಳಿಗೆ ತನ್ನ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕಿನ್ನಿಗೋಳಿಯ ಮಹಿಳೆ ಲಿಂಡಾ ಶಾರೆನ್ ಡಿಸೋಜ (41) ಅವರು ರಕ್ತದೊತ್ತಡ ಕಾಯಿಲೆಗೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ಲಿಂಡಾ ಶಾರೆನ್ ಅವರ ಸಹೋದರರು ಅವರ ಅಂಗಾಂಗ ದಾನ ಮಾಡಲು ತೀರ್ಮಾನಿಸಿದ್ದು, ಭಾನುವಾರ ಸಂಜೆ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ.
ಲಿಂಡಾ ಅವರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಆಕೆಯ ಸಹೋದರರಾದ ಲ್ಯಾನ್ಸಿ ಡಿಸೋಜ ಹಾಗೂ ಸಂತೋಷ್ ಡಿಸೋಜ ಅವರ ಗಮನಕ್ಕೆ ತಂದು, ಆಕೆಯ ಅಂಗಾಗ ದಾನ ಮಾಡಬಹುದೇ ಎಂದು ಕೇಳಿಕೊಂಡ ವೇಳೆ ಅವರು ಅಂಗಾಗ ದಾನಕ್ಕೆ ಆಸಕ್ತಿ ತೋರಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ಅಂಗಾಗ ದಾನ ನಿಯಂತ್ರಣ ಸಂಸ್ಥೆ ಜೀವ ಸಾರ್ಥಕತೆಯನ್ನು ಸಂಪರ್ಕಿಸಿ ಲಿಂಡಾ ಅವರ ಅಂಗಾಗಳನ್ನು ದಾನ ಮಾಡಲು ವ್ಯವಸ್ಥೆ ಮಾಡಲಾಯಿತು.
ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಲಿಂಡಾ ಅವರ ಹೃದಯ ಹಾಗೂ ಶ್ವಾಸಕೋಶ, ಲಿವರ್ ಬೆಂಗಳೂರಿನ ಆಸ್ಪತ್ರೆಗೆ ಎರಡು ಕಿಡ್ನಿಗಳ ಪೈಕಿ ಒಂದು ಮಣಿಪಾಲ ಆಸ್ಪತ್ರೆಗೆ ಹಾಗೂ ಇನ್ನೊಂದು ಕಿಡ್ನಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಹಾಗೂ ಭಾಗಶಃ ಚರ್ಮವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಕಸಿ ಮಾಡಲು ದಾನ ಮಾಡಲಾಗಿದೆ.
ಲಿಂಡಾ ಶಾರೆನ್ ಡಿಸೋಜ ಅವರ ಅಂಗಾಗಳನ್ನು ಕೊಂಡೊಯ್ಯಲು ಬೆಂಗಳೂರು ಹಾಗೂ ಚೆನ್ನೈನ ಆಸ್ಪತ್ರೆಗಳಿಂದ ತಜ್ಞರ ತಂಡವು ಭಾನುವಾರ ಬೆಳಗ್ಗೆ ವಿಮಾನದಲ್ಲಿ ಆಗಮಿಸಿತ್ತು. ಅಂಗಾಗಳನ್ನು ಬೇರ್ಪಡಿಸಿ ಹಾಗೂ ವರ್ಗೀಕರಿಸುವ ಕಾರ್ಯ ಮಧ್ಯಾಹ್ನ 12.30ರಿಂದ ಪ್ರಾರಂಭವಾಗಿ ಸಂಜೆ 5.30ರವರೆಗೆ ನಡೆದಿದೆ.
ಭಾನುವಾರ ಸಂಜೆ ಆಂಬುಲೆನ್ಸ್ ಮೂಲಕ ಹೃದಯ, ಶ್ವಾಸಕೋಶ ಹಾಗೂ ಲಿವರ್ ಅನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಬಳಿಕ ಅಲ್ಲಿಂದ ವಿಮಾನದ ಮೂಲಕ ಚೆನ್ನೈ ಹಾಗೂ ಬೆಂಗಳೂರಿಗೆ ಸಾಗಿಸಲಾಯಿತು. ಬಳಿಕ ಆಂಬುಲೆನ್ಸ್‌ಗೆ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಸಾಗಿಸಲು ಮಂಗಳೂರು ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದರು.
ಲಿಂಡಾ ಶಾರೆನ್ ಡಿಸೋಜ ಅವರು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ರಕ್ತದೊತ್ತಡ ಕಾಯಿಲೆಯ ಕಾರಣದಿಂದ ಅವರು ನಾಲ್ಕು ವರ್ಷಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದು ತಾಯೊ ಜೊತೆ ವಾಸವಿದ್ದರು. ಲಿಂಡಾ ಅವರಿಗೆ ರಕ್ತದೊತ್ತಡ ಹಾಗೂ ತಲೆ ನೋವು ಹೆಚ್ಚಾದ ಕಾರಣ ಅವರನ್ನು ಜುಲೈ 11ರಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಅವರು, “ಸಿಟಿ ಸ್ಕ್ಯಾನ್ ಮಾಡಿ ಸಂದರ್ಭ ಲಿಂಡಾ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದ್ದು, ಇದರಿಂದಾಗಿ ಅವರು ಪ್ರಜ್ಞಾಹೀನರಾದ ಕಾರಣ ಅವರನ್ನು ತೀವ್ರ ನಿಗಾ ಘಟಕದ ವೆಂಟಿಲೇಟರ್‌ನಲ್ಲಿ ದಾಖಲಿಸಲಾಗಿತ್ತು. ಆದರೆ, ಶನಿವಾರದಂದು ಅವರ ಮೆದುಳು ನಿಷ್ಕ್ರಿಯಗೊಂಡಿತ್ತು” ಎಂದು ತಿಳಿಸಿದ್ದಾರೆ.
“ಲಿಂಡಾ ಅವರು ಸಹೋದರರು, ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಗಳನ್ನು ದಾನ ಮಾಡಿ ಉತ್ತಮ ಕಾರ್ಯ ಮಾಡಿದ್ದಾರೆ. ದಾನಗಳಲ್ಲಿ ಅಂಗಾಗ ದಾನ ಶ್ರೇಷ್ಟ ದಾನ” ಎಂದಿದ್ದಾರೆ.
“ನನ್ನ ಸಹೋದರಿ ಸಾವನ್ನಪ್ಪಿದ್ದರೂ ಆಕೆಯ ಅಂಗಾಗಳನ್ನು ದಾನ ಮಾಡುವ ಮೂಲಕ ಆಕೆ ಬೇರೆಯವರ ಬಳಿ ಜೀವಂತವಾಗಿರುತ್ತಾರೆ. ಆಕೆಯ ಬದುಕು ಇದರಿಂದ ಸಾರ್ಥಕವಾದಂತಾಗುತ್ತದೆ” ಎಂದು ಲಿಂಡಾ ಸಹೋದರರಾದ ಲ್ಯಾನ್ಸಿ ಪ್ರಕಾಶ್ ಡಿಸೋಜ ಹಾಗೂ ಸಂತೋಷ್ ಡಿಸೋಜ ಹೇಳಿದ್ದಾರೆ.