ಬೆಳ್ತಂಗಡಿ: ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮಂಗಳೂರಿನ ಖಾಸಗಿ ಬ್ಯಾಂಕ್ ನ ವಾಹನದ ಚಾಲಕ ಮತ್ತು ಬೆಂಗಾವಲು ಸಿಬ್ಬಂದಿ (ಗನ್ ಮ್ಯಾನ್) ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಚಾಲಕನನ್ನು ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿ ನಿವಾಸಿ ಜಯಪ್ರಕಾಶ್ ಕುಲಾಲ್(45) ಎಂದು ಗುರುತಿಸಲಾಗಿದೆ. ಗನ್ ಮ್ಯಾನ್ ರ ಮಾಹಿತಿ ಇನ್ನಷ್ಟೇ ಸಿಗಬೇಕಷ್ಟೆ.
ಐ.ಸಿ.ಐ.ಸಿ.ಐ ಬ್ಯಾಂಕಿನ ವಾಹನ ಚಾಲಕರಾಗಿದ್ದ ಜಯಪ್ರಕಾಶ್ ಕೇರಳ ರಾಜ್ಯದ ಎಟಿಎಂಗಳಿಗೆ ಹಣವನ್ನು ತುಂಬಿಸುವ ಸಲುವಾಗಿ ಸಂಸ್ಥೆಯ ಮಹೀಂದ್ರ ಕಂಪನಿಯ ಬೊಲೆರೊ ವಾಹನವನ್ನು ಚಲಾಯಿಸುತ್ತಿದ್ದ ವೇಳೆ ಕಣ್ಣೂರು ಜಿಲ್ಲೆಯ ಪೆರಿಯಾರು ಸಮೀಪ ಗೂಡ್ಸ್ ಸಾಗಾಟದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೊ ವಾಹನದಲ್ಲಿದ್ದ ಚಾಲಕ ಜಯಪ್ರಕಾಶ್ ಕುಲಾಲ್ ಹಾಗೂ ಗನ್ ಮ್ಯಾನ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ಎಲ್ಲಾ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಮತ್ತು ಮೃತರ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಮನೆಯವರು ಮತ್ತು ಸಂಬಂಧಿಕರು ಕೇರಳಕ್ಕೆ ತೆರಳಿದ್ದಾರೆ.
ಮೂಲತಃ ಕಡಬ ತಾಲೂಕಿನ ಅಲಂಗಾರು ಗ್ರಾಮ ನಿವಾಸಿಯಾಗಿರುವ ಜಯಪ್ರಕಾಶ್ ಕುಲಾಲ್ ರವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಕೆ.ಬಿ.ರಸ್ತೆ ಪಕ್ಕದಲ್ಲಿ ಖರೀದಿಸಿದ ಮನೆಯಲ್ಲಿ ವಾಸ್ತವ್ಯವಿದ್ದರು.
ಮೃತ ಜಯಪ್ರಕಾಶ್ ಕುಲಾಲ್, ಪತ್ನಿ ಕಳಿಯ ಗ್ರಾಮದ ಆಶಾ ಕಾರ್ಯಕರ್ತೆ ಪ್ರತಿಭಾ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ, ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.