ಬೆಳ್ತಂಗಡಿ, : ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಮಂಗಳೂರಿನ 1 ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾತ್ರವಲ್ಲದೆ 1.38 ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 1 ಲಕ್ಷ ರೂ. ಪರಿಹಾರವಾಗಿ ಸಂತ್ರಸ್ತರ ತಾಯಿಗೆ ನೀಡುವಂತೆ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ ಆನಂದ ನಾಯ್ಕ(39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ(39), ಚಾರ್ಮಾಡಿ ನಿವಾಸಿ ವಿನಯ್ ಕುಮಾರ್(34) , ಮೂಡುಕೋಡಿ ನಿವಾಸಿ ಪ್ರಕಾಶ್(35), ಬಂಟ್ವಾಳ ಪುದು ನಿವಾಸಿ ಲೋಕೇಶ್(38), ಮೇಲಂತಬೆಟ್ಟು ನಿವಾಸಿ ನಾಗರಾಜ್(43) ಶಿಕ್ಷೆಗೆ ಒಳಗಾದವರು. ಬೆಳ್ತಂಗಡಿ ದಿಡುಪೆ ನಿವಾಸಿ ಸುರೇಶ್ ನಾಯ್ಕ್ ಅವರನ್ನು 6 ಮಂದಿಯ ತಂಡ 2017 ರ ಎ.19ರಂದು ಕಾರಿನಲ್ಲಿ ಕರೆದೊಯ್ದಿದು ಕೊಲೆ ಮಾಡಿ ಸುಟ್ಟು ಹಾಕಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ವಿವರ:
ಆರೋಪಿ ಆನಂದ ನಾಯ್ಕ ವಿವಾಹಿತನಾಗಿದ್ದು ಮಕ್ಕಳಿದ್ದರೂ, ಯುವತಿಯೋರ್ವಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಅಲ್ಲದೆ ಆಕೆಯನ್ನು ಮದುವೆಯಾಗಬೇಕೆನ್ನುವ ಹಠಕ್ಕೆ ಬಿದು, ಆಕೆಯ ತಂದೆಯಲ್ಲಿ ಮದುವೆ ಪ್ರಸ್ತಾಪವಿರಿಸಿದ್ದಾಗ ಯುವತಿಯ ಮನೆಯವರು ನಿರಾಕರಿಸಿದ್ದರು.
ಇದಾದ ಕೆಲದಿನಗಳ ಬಳಿಕ ಆ ಯುವತಿಗೆ ಮದುವೆ ಸಂಬಂಧವೂ ದಿಡುಪೆ ನಿವಾಸಿ ಸುರೇಶ ನಾಯ್ಕ ಎಂಬವರೊಂದಿಗೆ ಕೂಡಿ ಬಂದಿತ್ತು. 2017 ರ ಏ. ೩೦ ರಂದು ನಿಶ್ಚಿತಾರ್ಥ ನಿಗದಿಯಾಗಿತ್ತು. ವಿಚಾರ ತಿಳಿದ ಆನಂದ ನಾಯ್ಕ ಸುರೇಶ ನಾಯ್ಕನ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು, ಈ ಸಂಬಂಧವನ್ನು ಬಿಟ್ಟು ಬಿಡು ಎಂದು ಒತ್ತಾಯಿಸಿದ್ದಾನೆ. ಇದಕ್ಕೆ ಸುರೇಶ ನಾಯ್ಕ ಒಪ್ಪದಿದ್ದಾಗ ಜೀವ ಬೆದರಿಕೆಯನ್ನೂ ಆನಂದ ನಾಯ್ಕ ಹಾಕಿದ್ದ.
ನಂತರ 2017 ಎಪ್ರಿಲ್ 29 ರಂದು 2 ನೇ ಆರೋಪಿ ಪ್ರವೀಣ್ ನಾಯ್ಕ ಎಂಬಾತ ಸುರೇಶ ನಾಯ್ಕನಿಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ಗಂಗಾ ಕಲ್ಯಾಣ್ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಈ ಬಗ್ಗೆ ಮಾತನಾಡಲು ದಾಖಲಾತಿಗಳೊಂದಿಗೆ ಉಜಿರೆಗೆ ಬನ್ನಿ ಎಂದು ತಿಳಿಸಿದ್ದ. ಅದರಂತೆ ಸುರೇಶ ನಾಯ್ಕ ಉಜಿರೆಗೆ ಬಂದಾಗ ಆರೋಪಿಗಳಾದ ಪ್ರವೀಣ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಒಟ್ಟು ಸೇರಿ ಸುರೇಶ ನಾಯ್ಕನನ್ನು ಓಮಿನಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ನಿಶ್ಚಿತಾರ್ಥ ಪ್ರಸ್ತಾಪವನ್ನು ಕೈ ಬಿಡುವಂತೆ ಒತ್ತಡ ಹಾಕಿದ್ದು, ಇದಕ್ಕೆ ಸುರೇಶ ನಾಯ್ಕ ಒಪ್ಪದೇ ಇದ್ದಾಗ ನೈಲಾನ್ ಹಗ್ಗದ ಸಹಾಯದಿಂದ ಕುತ್ತಿಗೆಗೆ ಬಿಗಿದ್ ಸುರೇಶ ನಾಯ್ಕ ನನ್ನು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಧರ್ಮಸ್ಥಳದ ಅವೆಕ್ಕಿ ಎಂಬಲ್ಲಿ ಕೊಂಡೊಯ್ದು ಗೋಣಿ ಚೀಲ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗುರುತು ಸಿಗದಂತೆ ಸುಟ್ಟು ಹಾಕಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಬಂಟ್ವಾಳ ಪೊಲಿಸ್ ಉಪಾಧೀಕ್ಷಕರಾಗಿದ್ದ ರವೀಶ್ ಸಿ ಆರ್ ರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ರವರು ತನಿಖೆ ನಡೆಸಿ, ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ ಎಸ್ ಐ ಕೊರಗಪ್ಪ ನಾಯ್ಕ, ಸಿಬ್ಬಂದಿಗಳಾದ ಬೆನ್ನಿಚ್ಚನ್ , ಸ್ಯಾಮುವೆಲ್, ವಿಜು, ಪ್ರಮೋದ್ ನಾಯ್ಕ್, ರಾಹುಲ್ ರಾವ್, ವೃತ್ತ ಕಛೇರಿಯ ಸಿಬ್ಬಂದಿಗಳಾದ ವೆಂಕಟೇಶ್ ನಾಯ್ಕ್, ಪ್ರವೀಣ್ ದೇವಾಡಿಗ, ನವಾಝ್ ಬುಡ್ಕಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ರವರು ಸಹಕರಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ಹಾಗೂ ರಾಜು ಪೂಜಾರಿರವರು ವಾದಿಸಿದ್ದರು.