ಉಜಿರೆ: ಆದರ್ಶಗಳು ಕುಸಿದಿರುವಾಗ ನಮಗೆ ಆದರ್ಶವಾಗಿ ಕಾಣಿಸುವುದು ಸ್ವಾತಂತ್ರ್ಯ ಹೋರಾಟಗಾರರು. ಅವರು ಅಹಿಂಸಾವಾದಿಗಳಿರಲಿ, ಹಿಂಸಾವಾದಿಗಳಿರಲಿ ಪರಸ್ಪರ ಗೌರವವಿತ್ತು ಮತ್ತು ಸಾಮಾನ್ಯ ಧ್ಯೇಯವಿತ್ತು. ನಮ್ಮ ಹಿರಿಯರು ಕಡು ಕಷ್ಟದಿಂದ ಒಂದು ಹೊತ್ತು ಊಟ ಮೂರು ಹೊತ್ತು ಊಟ ಮಾಡಲು ಸಾಧ್ಯವಾಗುವ ನಮ್ಮ ಬದುಕನ್ನು ಕಟ್ಟಿದರು. ಅವರು ಮೂರು ಹೊತ್ತು ಊಟ ಮಾಡಿದ್ದರೆ ನಮಗೆ ಒಂದು ಹೊತ್ತು ಊಟ ಸಿಗುತ್ತಿರಲಿಲ್ಲ. ಇದರ ಅರಿವು ಇರಬೇಕು. ಗಾಂಧೀಜಿ ಆ ಕಾಲಮಾನದ ಸ್ವಾತಂತ್ರ್ಯ ಹೋರಾಟಗಾರರ, ಹಿರಿಯರ ಪ್ರತಿನಿಧಿಯಷ್ಟೆ. ಆ ಪ್ರತಿನಿಧಿತ್ವದ ಮೂಲಕ ಮೌಲಿಕ ಚಿಂತನೆಗಳು ಸಮಾಜದಲ್ಲಿ ಬೆಳೆಯಬೇಕು. ಗಾಂಧೀಜಿಯವರ ಚಿಂತನೆಗಳು ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು. ಯೋಗ್ಯರು ಮಾತನಾಡದೆ ಇರುವುದು ಮತ್ತು ಅಯೋಗ್ಯರು ಮಾತನಾಡುವುದು ಎರಡೂ ಅಪಾಯಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸದ್ವಿಚಾರಗಳನ್ನು ಪಸರಿಸಬೇಕು ಎನ್ನುವುದು ಗಾಂಧಿ ವಿಚಾರ ವೇದಿಕೆಯ ಉದ್ದೇಶವಾಗಿದೆ ಎಂದು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆಯವರು ಹೇಳಿದರು. ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಗಾಂಧಿ ವಿಚಾರ ವೇದಿಕೆಯ ಸಮಿತಿ ರಚನೆಯ ಸಂದರ್ಭದಲ್ಲಿ ಮಾತನಾಡಿದರು.
ವೇದಿಕೆಯ ಉದ್ದೇಶವನ್ನು ವಿವರಿಸಿದ ಸಾಹಿತಿ ಅರವಿಂದ ಚೊಕ್ಕಾಡಿ,” ಆರೋಗ್ಯ, ಶಿಕ್ಷಣ, ಆರ್ಥಿಕತೆ, ಪರಿಸರ, ಸಾಮರಸ್ಯದಿಂದ ಸಮೃದ್ಧ ಜೀವನ ಹೀಗೆ ಯಾವ ವಿಚಾರದಲ್ಲಿ ನೋಡಿದರೂ ಗಾಂಧೀಜಿ ಪ್ರಸ್ತುತರಾಗಿದ್ದಾರೆ. ಆದ್ದರಿಂದ ಗಾಂಧಿ ಚಿಂತನೆಗಳ ಅರಿವನ್ನು ಬೆಳೆಯಿಸುವುದು ವೇದಿಕೆಯ ಉದ್ದೇಶವಾಗಿದೆ” ಎಂದರು. ಸಧ್ಯಕ್ಕೆ ಗಾಂಧಿ ವನ ನಿರ್ಮಾಣ, ಗಾಂಧೀಜಿ ಕುರಿತಂತೆ ತಾಲೂಕಿನ ಯಾವುದಾದರೂ ಮನೆಯಲ್ಲಿ ಊರವರು ಸೇರಿ ತಿಂಗಳಿಗೊಮ್ಮೆ ಗಾಂಧಿ ಚಿಂತನೆಗಳ ಬಗ್ಗೆ ಸಂವಾದ, ಮಕ್ಕಳಿಗಾಗಿ ಗಾಂಧಿ ಚಿಂತನೆಗಳ ಬಗ್ಗೆ ಕಿರು ಪುಸ್ತಕ ಪ್ರಕಟಣೆಯಂತಹ ಯೋಜನೆಯನ್ನು ಹಮ್ಮಿಕೊಂಡಿದ್ದು ಉಡುಪಿ ಜಿಲ್ಲಾ ಕ. ಸ. ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಇದೇ ತಿಂಗಳು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಲಿದ್ದು, ನಂತರ ಬದುಕಿರುವ ತನಕವೂ ಶಾಲೆಗಳಿಗೆ ಹೋಗಿ ಗಾಂಧಿ ತತ್ವ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಾತೃ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗಾಂಧೀಜಿಯವರನ್ನು ಭೇಟಿಯಾಗಿ ಅವರಿಂದ ಪ್ರೇರಿತರಾಗಿ ಗಾಂಧೀಜಿಯವರ ಆದೇಶದಂತೆ ಮುಂಡಾಜೆಯಲ್ಲಿ ಶೈಕ್ಷಣಿಕ ಕೆಲಸಗಳನ್ನು ಮಾಡಿದ್ದ ಭಿಡೆ ನಾರಾಯಣ ಭಟ್ ಅವರ ಕಾಲದಿಂದ ಗಾಂಧಿವಾದಿ ಪರಂಪರೆಯವರಾದ ಶ್ರೀಧರ ಜಿ. ಭಿಡೆಯವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಮಾಜಿ ಶಾಸಕರೂ, ವಿನಯಚಂದ್ರ ಅವರನ್ನು ಉಪಾಧ್ಯಕ್ಷರಾಗಿ ಆರಿಸಲಾಯಿತು. ಅಧ್ಯಕ್ಷರ ಸೂಚನೆಯಂತೆ ತಾತ್ಕಾಲಿಕವಾಗಿ ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತಿ ಅರವಿಂದ ಚೊಕ್ಕಾಡಿಯವರನ್ನು ಆಯ್ಕೆ ಮಾಡಲಾಯಿತು.
ದಲಿತ ಹೋರಾಟಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಚ್ಚುತ ಮೇಲ್ಕಜೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗಾಗಿ ಉಪಾಧ್ಯಕ್ಷರಾಗಿ, ನೀಲಾವರ ಸುರೇಂದ್ರ ಅಡಿಗ ಅವರನ್ನು ಉಡುಪಿ ಜಿಲ್ಲೆಗಾಗಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ವೇದಿಕೆಯ ಮಹಿಳಾ ಘಟಕಕ್ಕೆ, ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಗೆ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಶ್ರೀಮತಿ ಜಯಶ್ರೀ ಗೌಡ ಅವರನ್ನು ಆರಿಸಲಾಯಿತು. ಜತೆ ಕಾರ್ಯದರ್ಶಿಗಳಾಗಿ ಶಶಿಧರ ಠೋಸರ್ ಮತ್ತು ಗಂಡಿಬಾಗಿಲು ಚರ್ಚ್‌ನ ಗುರುಗಳಾದ ಫಾದರ್ ಮ್ಯಾಥ್ಯೂ ಅವರನ್ನು ಆಯ್ಕೆ ಮಾಡಲಾಯಿತು.
ನೇತಾಜಿ ಗಾಂಧಿಯವರನ್ನು ಉತ್ತರ ಕರ್ನಾಟಕಕ್ಕೆ, ಮಂಡ್ಯದ ಚಂದ್ರಣ್ಣ ಎನ್. ಶರಣಪ್ಪ ಅವರನ್ನು ದಕ್ಷಿಣ ಕರ್ನಾಟಕಕ್ಕೆ ಆಯ್ಕೆ ಮಾಡಲಾಯಿತು. ವಿಸ್ತರಣಾ ಸಂಯೋಜಕರಾಗಿ ಮುಷ್ತಾಕ್ ಹೆನ್ನಾಬೈಲ್ ಅವರನ್ನು ಆಯ್ಕೆ ಮಾಡಲಾಯಿತು. ಮಾತೃ ಸಮಿತಿಯ ಸಮಗ್ರ ಸಂಯೋಜಕರಾಗಿ ಪುತ್ತೂರಿನ ವಿದ್ಯಾ ಮಾತಾ ಅಕಾಡೆಮಿಯ ವ್ಯವಸ್ಥಾಪಕರಾದ ಭಾಗ್ಯೇಶ್ ರೈ ಅವರನ್ನು ಆರಿಸಲಾಯಿತು.
ಕುಂದಾಪುರ ತಾಲೂಕಿಗೆ ಡಾ. ಜಗದೀಶ್ ಶೆಟ್ಟಿ, ಬ್ರಹ್ಮಾವರ ತಾಲೂಕಿಗೆ ರಂಜಿತ್ ಶೆಟ್ಟಿ, ಮಂಗಳೂರು ತಾಲೂಕಿಗೆ ಪುಷ್ಪರಾಜ್ ಗುಂಡ್ಯ, ಬೆಳ್ತಂಗಡಿ ತಾಲೂಕಿಗೆ ಶರತ್‌ಕೃಷ್ಣ ಪಡುವೆಟ್ಣಾಯ, ಪುತ್ತೂರು ತಾಲೂಕಿಗೆ ಝೆವಿಯರ್ ಡಿಸೋಜಾ, ಸುಳ್ಯ ತಾಲೂಕಿಗೆ ಲಕ್ಷ್ಮೀಶ ಗಬಲಡ್ಕ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿ ಆಗಸ್ಟ್ 15 ರ ಮೊದಲು ತಾಲೂಕು ಸಮಿತಿಯ ಪೂರ್ಣ ರಚನೆಯನ್ನು ಮಾಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯ ಹರಿಪ್ರಸಾದ್, ಪೆರಿಂಜೆಯ ಇಸ್ಮಾಯಿಲ್, ಸುಳ್ಯ ಗಾಂಧಿ ಚಿಂತನ ವೇದಿಕೆಯ ಮುಖ್ಯಸ್ಥ ಹರೀಶ್ ಬಂಟ್ವಾಳ್, ಪುತ್ತೂರಿನ ನಿಖರ ನ್ಯೂಸ್‌ನ ವ್ಯವಸ್ಥಾಪಕ ಚಿನ್ಮಯಕೃಷ್ಣ, ಸನ್ಮಾರ್ಗ ನ್ಯೂಸ್ ಚಾನೆಲ್‌ನ ಎ. ಕೆ. ಕುಕ್ಕಿಲ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಅವರ ಪ್ರತಿನಿಧಿಯಾಗಿ ಫಾದರ್ ಲಾರೆನ್ಸ್, ಬೆಳ್ತಂಗಡಿ ಜೈಕನ್ನಡಮ್ಮ ದಿನ ಪತ್ರಿಕೆಯ ಸ್ಥಾಪಕ ದೇವಿಪ್ರಸಾದ್, ಮಾಜಿ ಸೈನಿಕ ಗೋಪಾಲಕೃಷ್ಣ ಕಾಂಚೋಡು, ಅರವಿಂದ ಹೆಬ್ಬಾರ್ ಮುಂತಾದವರು ಭಾಗವಹಿಸಿದ್ದರು. ಶಶಿಧರ ಠೋಸರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.