ಉಪ್ಪಿನಂಗಡಿ: ಪಾನಮತ್ತನಾಗಿ ನಿವೃತ್ತ ಸೇನಾ ಉದ್ಯೋಗಿಯೋರ್ವ ಮಹಿಳೆಯೋರ್ವರ ಮನೆಗೆ ಕಲ್ಲೆಸೆಯುವುದು, ಕಲ್ಲೆಸೆತಕ್ಕೆ ಸಿಲುಕಿ ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದು, ಈಗಲೂ ನಿತ್ಯ ನಿರಂತರ ಕಿರುಕುಳ ನೀಡುತ್ತಿದ್ದು, ಆತನ ಕಿರುಕುಳದಿಂದ ತನ್ನ ಕುಟುಂಬವನ್ನು ರಕ್ಷಿಸುವಂತೆ ಮಹಿಳೆಯೋರ್ವರು ಪುತ್ತೂರು ಡಿ.ವೈ.ಎಸ್ಪಿ.ಯವರಿಗೆ ದೂರು ನೀಡಿದ್ದಾರೆ.
ಇಳಂತಿಲ ಗ್ರಾಮದ ಶಬರಿಗಿರಿ ಫಾರ್ಮ್ ನ ನಿವಾಸಿಯಾದ ಆಶಾ ಎಂಬವರು ಡಿವೈಎಸ್ಪಿ ಅವರಿಗೆ ದೂರು ನೀಡಿದ್ದು, “ಕಳೆದ ಎಪ್ರಿಲ್ 14ರಂದು ತನ್ನ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಗೆರೆಟೆ ಸಂಗ್ರಹಿಸಲು ಹೋಗಿದ್ದ ವೇಳೆಯಲ್ಲಿ ಸಮೀಪದ ನಿವಾಸಿಯಾಗಿರುವ ನಿವೃತ್ತ ಸೇನಾ ಉದ್ಯೋಗಿ ಜಯ ಪೂಜಾರಿ ಎಂಬವರು ತನ್ನ ತೋಟಕ್ಕೆ ಅಕ್ರಮ ಪ್ರವೇಶ ಮಾಡಿರುವುದಲ್ಲದೆ ನಿರಂತರವಾಗಿ ಕಲ್ಲೆಸೆದು ಕಣ್ಣಿಗೆ ಗಾಯಗೊಳಿಸಿದ್ದು,ಇದರಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಂಗಳೂರು ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸುದೀರ್ಘ ಚಿಕಿತ್ಸೆಯ ಬಳಿಕವೂ ಇದೀಗ ದೃಷ್ಠಿ ನಾಶವಾಗಿದೆ, ಆರೋಪಿ ಮದ್ಯವ್ಯಸನಿಯಾಗಿದ್ದು, ರಾತ್ರಿ ವೇಳೆ ಮನೆಗೆ ಬಂದು ಟಾರ್ಚ್ ಲೈಟ್ ಹಾಕುವುದು, ಅವ್ಯಾಚ ಶಬ್ದಗಳಿಂದ ನಿಂದನೆ ಮೊದಲಾದ ಕಿರುಕುಳವನ್ನು ನೀಡುತ್ತಿದ್ದು, ಕಲ್ಲೆಸೆತದ ಕೃತ್ಯವನ್ನು ಹಾಗೂ ರಾತ್ರಿ ವೇಳೆ ಮನೆಗೆ ಬಂದು ಕಿರುಕುಳ ನೀಡುವ ಕೃತ್ಯವನ್ನು ವಿಡಿಯೋ ಮೂಲಕ ದಾಖಲೀಕರಿಸಿ ಇದರ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಿದ್ದರೂ ಈವರೆಗೆ ನ್ಯಾಯ ದೊರೆಯಲಿಲ್ಲ” ಎಂದು ಡಿ.ವೈ.ಎಸ್ಪಿ.ಯವರಿಗೆ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ಹಿಂಸಾ ಪ್ರವೃತ್ತಿಯ ಮನೋಭಾವದವನಾಗಿದ್ದು, ತನ್ನ ಪತ್ನಿ ಮಕ್ಕಳನ್ನೇ ದೂರವಿರಿಸಿ ಏಕಾಂಗಿಯಾಗಿ ಜೀವನವನ್ನು ನಡೆಸುತ್ತಿದ್ದು, ನೆರೆ ಮನೆಯ ನಮ್ಮ ಮೇಲೆ ಆಕ್ರಮಣ ನಡೆಸುತ್ತಿರುವುದರಿಂದ ಕೃಷಿ ಕಾರ್ಯವನ್ನೂ ಕೂಡ ಮಾಡಲಾಗದೆ ಅಪಾರ ನಷ್ಠಕ್ಕೆ ತುತ್ತಾಗಿದ್ದೇವೆ, ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರಸಕ್ತ ಭಯದಿಂದ ಜೀವನ ನಡೆಸುತ್ತಿರುವ ನಮಗೆ ಬದುಕಿನ ಭದ್ರತೆಯನ್ನು ತಾವೇ ಒದಗಿಸಬೇಕೆಂದು ಅವರು ಡಿವೈಎಸ್ಪಿ.ಯವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೂರು ಸ್ವೀಕರಿಸಿದ ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.