ಬಂಟ್ವಾಳ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳ ಗ್ರಾಮದಲ್ಲಿ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್ ಕೊರೆದು ಪೈಪ್ ಅಳವಡಿಸಿ ಜು. 11 ರಿಂದ ಸುಮಾರು 40 ಲಕ್ಷದ ಪೆಟ್ರೋಲಿಯಂ ಉತ್ಪನ್ನ ಕಳ್ಳತನ ಮಾಡಿರುವ ಬಗ್ಗೆ ಜು.30 ರಂದು ದೂರು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಐವನ್ ಚಾರ್ಲ್ ಪಿಂಟೋ(43) ನನ್ನು ಆ.11 ರಂದು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಜೀಪ್, ಡಿಸೇಲ್ ಕೊಂಡು ಹೋಗಲು ಬಳಸಿದ ಕ್ಯಾನ್ ಗಳು ಮತ್ತು ಡಿಸೇಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕೃತ್ಯದಲ್ಲಿ ಪೈಪ್ ಲೈನ್ ಗೆ ಹೋಲ್ ತೆಗೆದು ವೆಲ್ಡಿಂಗ್ ಮಾಡಿ ಪೈಪ್ ಲೈನ್ ಅಳವಡಿಸಿದ ವೆಲ್ಡರ್ ಗಳಾದ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್ ಪ್ರೀತಮ್ ಡಿʻಸೋಜನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಉಳಿದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲೆಯ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ, ಬಂಟ್ವಾಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ, ಹೆಚ್.ಸಿಗಳಾದ ಜನಾರ್ಧನ, ಗೋಣಿಬಸಪ್ಪ, ಸುರೇಶ್ ಪಿ.ಸಿಗಳಾದ ಮನೋಜ್, ಪುನೀತ್ ರವರು ಭಾಗವಹಿಸಿದ್ದರು.