ಪುತ್ತೂರು:ಕಳೆದ ಮಾರ್ಚ್ ತಿಂಗಳಲ್ಲಿ,ವಿಟ್ಲ ಪೊಲೀಸ್ ಠಾಣಾ ಎಸ್ಐ ಮೇಲೆ, ಗುಂಡು ಹಾರಿಸಿ ಕೊಲ್ಲಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪೈಕಿ,ಕೇರಳ ರಾಜ್ಯದ ಉಪ್ಪಳದ ಹೈದರ್ ಎಂಬವನಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಕಳೆದ ಮಾರ್ಚ್ 25ರಂದು ಬೆಳಗಿನ ಜಾವ 4:00 ಗಂಟೆ ಸಮಯಕ್ಕೆ,ಬಂಟ್ವಾಳ ತಾಲೂಕು ಬಾಕ್ರಬೈಲು ಕಡೆಯಿಂದ, ಸಾಲೆತ್ತೂರು ಕಡೆಗೆ ಬಿಳಿ ಬಣ್ಣದ ಕಾರು ಬರುತ್ತಿದ್ದು,ಸದ್ರಿ ಕಾರನ್ನು ನಿಲ್ಲಿಸುವಂತೆ ವಿಟ್ಲದ ಅಂದಿನ ಎಸ್ಐ ವಿನೋದ್ ರೆಡ್ಡಿ ಮತ್ತು ಸಿಬ್ಬಂದಿಗಳು ಸೂಚಿಸಿದಾಗ, ಕಾರಿನ ಚಾಲನಾ ಸೀಟಿನ ಎಡಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು, ಪಿಸ್ತೂಲಿನಿಂದ ಎಸ್ಐ ಕಡೆಗೆ,ಗುರಿಯಿಟ್ಟು ಸಿಡಿಸುವುದನ್ನು ಕಂಡ ಎಸ್ಐ ಯವರು,ಬದಿಗೆ ಸರಿದು ಗುಂಡಿನಿಂದ ತಪ್ಪಿಸಿಕೊಂಡಿದ್ದರು. ನಂತರ ಆರೋಪಿಗಳು ಸಂಚರಿಸುತಿದ್ದ ಕಾರು ವೇಗವಾಗಿ ಚಲಿಸಿ, ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು, ರಸ್ತೆಬದಿಯ ಕೆಸರಲ್ಲಿ ಹೂತುಹೋಗಿ ಬಾಕಿಯಾಗಿತ್ತು.ಕಾರಿನಲ್ಲಿದ್ದವರು ತಪ್ಪಿಸಿಕೊಂಡು, ಓಡಿ ಹೋಗಲು ಪ್ರಯತ್ನಿಸಿದಾಗ, ಆರೋಪಿಗಳ ಪೈಕಿ, ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಕಾರನ್ನು ಪರಿಶೀಲಿಸಿದಾಗ,ಆರೋಪಿತ ರಿಂದ ವಿದೇಶಿ ನಿರ್ಮಿತ ಪಿಸ್ತೂಲುಗಳು,ಪಿಸ್ತೂಲ್ ಗೆ ಬಳಸುವ ಕಚ್ಚಾ ಗುಂಡುಗಳು, ಬಂದೂಕುಗಳು, ಮಾರಕಾಯುಧಗಳು ಹಾಗೂ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ತದನಂತರ, ಪರಾರಿಯಾದ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ ಪೊಲೀಸರು, ದಿನಾಂಕ 5 /4 /2021ರಂದು ಬೆಳಗಿನ ಜಾವ ಮಾಣಿ ಸಮೀಪ, ಉಳಿದ ಆರೋಪಿಗಳನ್ನು ಪತ್ತೆಹಚ್ಚಿ, ಅವರಿಂದ ವಿದೇಶಿ ಪಿಸ್ತೂಲುಗಳು, ಬಂದೂಕುಗಳು, ಕಚ್ಚಾ ಗುಂಡುಗಳನ್ನು ವಶಪಡಿಸಿಕೊಂಡು, ಬಂಧಿಸಿ, ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಆರೋಪಿಗಳಿಗೆ ನ್ಯಾಯಾಲಯ,ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಎಲ್ಲಾ ಆರೋಪಿಗಳು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ, ಪೊಲೀಸರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಪೋಲಿಸರಿಂದ ತಪ್ಪಿಸಿಕೊಳ್ಳಲು ಕೇರಳದಿಂದ ಕರ್ನಾಟಕಕ್ಕೆ ಬರುವ ಸಮಯ, ವಿಟ್ಲ ಪೊಲೀಸರಿಗೆ ಸಿಕ್ಕಿದ ಮಾಹಿತಿ ಮೇರೆಗೆ, ಆರೋಪಿಗಳ ಬಂಧನಕ್ಕೆ, ವಿಟ್ಲ ಪೊಲೀಸರುi ಬಲೆ ಬೀಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿತ್ತು.
ಆರೋಪಿಗಳ ಮೇಲೆ ಮಂಜೇಶ್ವರ ಮತ್ತು ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿತ್ತು.
ಇದೀಗ ಈ ಪ್ರಕರಣದಲ್ಲಿ, ಏಳು ಜನ ಆರೋಪಿಗಳ ಪೈಕಿ, ಉಪ್ಪಳದ ಹೈದರ್ ಎಂಬಾತನಿಗೆ, ದ ಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿ ಬಿಡುಗಡೆಗೊಳಿಸಿದೆ. ಆರೋಪಿತನ ಪರವಾಗಿ ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದ್ದರು.