ಪುತ್ತೂರು: ಕೇರಳ ರಾಜ್ಯದ ನೋಂದಾಯಿತ ಓಮ್ನಿ ಕಾರಿನಲ್ಲಿ ಬಂದು ಹಣ ಸಂಗ್ರಹಿಸುತ್ತಿದ್ದ ಅಪರಿಚಿತ ಮೂವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ ಘಟನೆ ಪುತ್ತೂರು ವ್ಯಾಪ್ತಿಯ ಕೋಡಿಂಬಾಡಿಯಲ್ಲಿ ನಡೆದಿದೆ.
ಈರ್ವರು ಮಹಿಳೆಯರು ಮತ್ತು ಓರ್ವ ಯುವಕ ಕೋಡಿಂಬಾಡಿ ಪರಿಸರದಲ್ಲಿ ಹಣ ಸಂಗ್ರಹಿಸುತ್ತಿದ್ದರು. ಆಶ್ರಮಕ್ಕಾಗಿ ಈ ಹಣ ಸಂಗ್ರಹಿಸುವುದಾಗಿ ಅವರು ತಿಳಿಸುತ್ತಿದ್ದರು. ಹಣ ಸಂಗ್ರಹಿಸುತ್ತಿದ್ದ ಅಪರಿಚಿತ ವ್ಯಕ್ತಿಗಳ ವರ್ತನೆಯ ಬಗ್ಗೆ ಸಂಶಯಗೊಂಡ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಅವರು ವಿಚಾರಿಸಿ ಅಸ್ಪಷ್ಟ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿದರು.
‘ಹೊಯ್ಸಳ’ ಪೊಲೀಸರು ಸ್ಥಳಕ್ಕಾಗಮಿಸಿ ಅವರನ್ನು ವಿಚಾರಿಸಿ ಆಶ್ರಮದ ಪ್ರಮುಖರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆಶ್ರಮಕ್ಕೆ ಹಣ ಸಂಗ್ರಹಿಸುತ್ತಿರುವುದನ್ನು ಖಚಿತ ಪಡಿಸಿದರು. ಬಳಿಕ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿವರ ಪಡೆದುಕೊಂಡು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಿ ಅವರನ್ನು ಕಳುಹಿಸಿಕೊಟ್ಟರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪರಿಚಿತರು ಯಾರೇ ಇರಲಿ ವ್ಯವಹಾರ ಮಾಡುವಾಗ ಗ್ರಾಮ ಪಂಚಾಯತ್ ನ ಅನುಮತಿ ತೆಗೆದುಕೊಳ್ಳುವಂತಾಗಬೇಕು ಎಂದು ಗ್ರಾ.ಪಂ ವಿನಂತಿಸಿದ್ದಾರೆ.