ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು, ಐವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬಿಸಿರೋಡು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ಸೆ.25 ರಂದು ನಡೆದಿದೆ.

ಸ್ವಿಫ್ಟ್ ಡಿಸೈರ್(KA 21 N 6931)ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡರೆ ಉಳಿದ ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರು ನಿವಾಸಿಗಳಾದ ಆನಂದಿತ್, ಶರತ್,ಶುಸಾನ್, ಹರ್ಷ,ಶ್ರೀರಾಮ್ ಗಾಯಗೊಂಡವರು. ಮಂಗಳೂರಿನಿಂದ ಪುತ್ತೂರು ಕಡೆಗೆ ಕಿರು ಚಲನಚಿತ್ರವೊಂದರ ಶೂಟಿಂಗ್ ನಡೆಸಲು ಐದು ಜನರ ತಂಡವೊಂದು ಬೆಳಿಗ್ಗೆ ಮಂಗಳೂರಿನಿಂದ ಹೊರಟಿದ್ದು, ರಾಮಲ್ ಕಟ್ಟೆ ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ತೆರಳಿ ಮರವೊಂದಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂ ಗೊಂಡಿದೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್. ಐ.ರಾಜೇಶ್ ಕೆ.ವಿ.ಭೇಟಿ ನೀಡಿದ್ದಾರೆ.
