ಚಾಮರಾಜನಗರ: ನಟ ಪುನೀತ್ ರಾಜ್ ಕುಮಾರ್ ನಿಧನ ವಿಷಯ ಕೇಳಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ನಡೆದಿದೆ.
ಮುನಿಯಪ್ಪ (29) ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಪುನೀತ್ ಸಾವಿನ ವಿಷಯ ಕೇಳುತ್ತಲೇ ಮುನಿಯಪ್ಪ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರೂ, ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಮೃತ ಮುನಿಯಪ್ಪ ಪುನೀತ್ ಅವರ ಪ್ರತಿಯೊಂದು ಚಿತ್ರವನ್ನು ತಪ್ಪದೇ ನೋಡುತ್ತಿದ್ದರು. ಅಲ್ಲದೇ ಆಗಾಗ್ಗೆ ಬೆಂಗಳೂರಿಗೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿದ್ದರಂತೆ.
ಮೃತ ಅಭಿಮಾನಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ನಾಳೆ ಮರೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.