ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಸೋಮವಾರದಂದು ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದಡಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಇದರ ಪ್ರಾಂಶುಪಾಲರಾದ ಗೋಪಾಲಕೃಷ್ಣ ಉಪಾಧ್ಯಾಯ ಜೆ ಅವರು ಉದ್ಘಾಟಿಸಿ, ಮಾತನಾಡುತ್ತಾ ಕನ್ನಡ ಕೇವಲ ನವೆಂಬರ್ ಕನ್ನಡವಾಗದೇ, ಪ್ರತಿನಿತ್ಯವು ಕನ್ನಡ ರಾಜ್ಯೋತ್ಸವ ದಿನಾಚರಣೆಯಂತೆ ನಡೆದುಕೊಳ್ಳಬೇಕು. ಬೇರೆ ಭಾಷೆಯೊಂದಿಗೆ ನಮ್ಮೊಡನೆ ಮಾತನಾಡುವಾಗ ಅವರೊಂದಿಗೆ ನಾವು ಅವರ ಭಾಷೆ ಮಾತನಾಡದೇ ನಮ್ಮ ಕನ್ನಡ ಭಾಷೆಯಲ್ಲೇ ಸಂವಾದ ಮಾಡಿದಾಗಲೇ ಕನ್ನಡ ಬೆಳೆಯಲು ಸಾಧ್ಯ ಕನ್ನಡವು ತನ್ನ ಹಿರಿಮೆಯಿಂದ ವಿಶ್ವದಾದ್ಯಂತ ಗುರುತಿಸಿಕೊಂಡಿದೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲುರವರು ಕನ್ನಡಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ ಡಾ. ರಾಜ್‌ಕುಮಾರ್ ಹಾಗೂ ಅವರ ಪುತ್ರ ಇತ್ತೀಚಿಗೆ ನಿಧನ ಹೊಂದಿದ ಪುನೀತ್ ರಾಜ್‌ಕುಮಾರ್ ರವರನ್ನು ನೆನಪಿಸುತ್ತಾ ಮನೆಯಿಂದಲೇ ಕನ್ನಡದ ಮಹತ್ವದ ಬಗ್ಗೆ ತಿಳಿಸುವುದು ಅಗತ್ಯ, ಹಾಗೇ ತಂದೆ ತಾಯಿ ತಮ್ಮ ಮಕ್ಕಳಿಗೆ ಕನ್ನಡದ ಅಭಿರುಚಿಯನ್ನು ಬೆಳೆಸಲು ಪ್ರಾಮುಖ್ಯತೆ ನೀಡಬೇಕೆಂದರು.
ಈ ಸಂದರ್ಭ ಅಗಲಿದ ಪುನೀತ್ ರಾಜ್‌ಕುಮಾರ್ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಸಂಪತ್ ಪಕ್ಕಳ ಸ್ವಾಗತಿಸಿ, ಅರ್ಪಿತ್ ಟಿ.ಎ ವಂದಿಸಿದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರಿಯಾ ಉಪಸ್ಥಿತರಿದ್ದು, ಕು. ಅನ್ನಪೂರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.