ಕಡಬ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಪಂಚಾಯತ್ ವತಿಯಿಂದ ಕಾಯ್ದಿರಿಸಿದ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಪಂಚಾಯತ್ ಸ್ವತ್ತನ್ನು ಧ್ವಂಸ ಮಾಡಿದಲ್ಲದೇ, ಕೃಷಿ ಮಾಡಿ, ರೈತ ಸಂಘಟನೆ ಮೂಲಕ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಠಾಣೆಗೆ ದೂರು ನೀಡಿದ ಘಟನೆ ಕಡಬ ತಾಲೂಕಿನ ಪೆರಾಬೆಯಲ್ಲಿ ನಡೆದಿದೆ.
ತುಳಸಿ, ಚಂದ್ರಶೇಖರ ಪೂಜಾರಿ, ಅಶೋಕ ಇವರುಗಳ ವಿರುದ್ಧ ದೂರು ನೀಡಲಾಗಿದೆ.
ಪೆರಾಬೆ ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕಾಯ್ದಿರಿಸಿದ ಜಾಗದಲ್ಲಿ ರಕ್ಷಣೆಗೆಂದು ಬೇಲಿ ನಿರ್ಮಾಣ ಮಾಡಿದ್ದು, ಅ.13 ರಂದು ತುಳಸಿ, ಚಂದ್ರಶೇಖರ ಪೂಜಾರಿ, ಅಶೋಕ ಎಂಬವರು ಅಕ್ರಮವಾಗಿ ಪ್ರವೇಶಿಸಿ ಬೇಲಿಯನ್ನು ಧ್ವಂಸ ಮಾಡಿ ಪಂಚಾಯತ್ ಸೊತ್ತನ್ನು ನಾಶ ಮಾಡಿ ಪಂಚಾಯತ್ ಗೆ 50,000 ರೂ. ನಷ್ಟ ಉಂಟು ಮಾಡಿದ್ದು, ಪರಿಶೀಲನೆಗೆ ಹೋದಾಗ ರೈತ ಸಂಘಟನೆ ಮೂಲಕ ಬೆದರಿಕೆಯೊಡ್ಡಿ ನ.4 ರಂದು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಅನಧಿಕೃತವಾಗಿ ರೈತ ಸಂಘಟನೆ ಎಂದು ಹೇಳುಕೊಂಡು ಕೆಲವು ಜನ ಗುಂಪು ಗೂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ. 92/2021 ಕಲಂ : 447,434,506, 34 ಐಪಿಸಿ ಮತ್ತು ಕಲಂ: 2(ಎ) (6) ಕೆಪಿಡಿಎಲ್ ಪಿ ಕಾಯ್ದೆ 1981 ರಂತೆ ಪ್ರಕರಣ ದಾಖಲಾಗಿದೆ.