ಉಪ್ಪಿನಂಗಡಿ: ಹತ್ತನೇ ತರಗತಿಯ ವಿದ್ಯಾರ್ಥಿನಿಯೊರ್ವಳು ಹೆಣ್ಣು ಮಗುವಿಗೆ ಸಹಜ ಹೆರಿಗೆಯಲ್ಲಿ ಜನ್ಮ ನೀಡಿದ ಘಟನೆ ನಡೆದಿದ್ದು, ಘಟನೆಗೆ ಕಾರಣನಾದ ಆರೋಪಿಯನ್ನು
ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೌಢ ಶಾಲೆಯೊಂದರಲ್ಲಿ ಪ್ರಸಕ್ತ ಹತ್ತನೇ ತರಗತಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯ ಉದರದಲ್ಲಿ ಗಡ್ಡೆ ಬೆಳೆದಿದೆ ಎಂದು ತಿಳಿದು ಹೆತ್ತವರು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ತುಂಬು
ಗರ್ಭವತಿಯಾಗಿರುವುದು ಬೆಳಕಿಗೆ ಬಂದಿತ್ತು.
ಆಕೆ ಮಂಗಳೂರು ಪರಿಸರದ ಆಸ್ಪತ್ರೆಯೊಂದರಲ್ಲಿ ಗುರುವಾರದಂದು ಸಹಜ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತಂದಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ತನ್ನ ಮೇಲೆ ಹಿರೇಬಂಡಾಡಿ ಗ್ರಾಮದ ನಿವಾಸಿ ಕೇಶವ ( 34 ವ.) ಎಂಬಾತ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅವಿವಾಹಿತ ಕೇಶವರನ್ನು ಬಂಧಿಸಿದ್ದಾರೆ.