ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಎರಡು ಕೋಮುಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ನಡುವೆ ಹಲ್ಲೆ ಮತ್ತು ಇರಿತ ಪ್ರಕರಣಗಳ ಬಳಿಕ ಇದೀಗ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಮಾನಹಾನಿಕರ ಅಭಿಯಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ ಯವರು ಪ್ರೊಬೆಷನರಿ ಪ್ರಭಾರ ಡಿ.ಎಸ್.ಪಿ. ಧನ್ಯ ರವರಲ್ಲಿ ದೂರು ನೀಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳನ್ನು ನಿಂದಿಸುವ ಹಾಗೂ ಮಾನಹಾನಿಗೊಳಿಸುವ ಬರಹಗಳ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾನಸಿಕ ಹಿಂಸೆ ನೀಡುವಂತ ಕೃತ್ಯಗಳು ನಡೆಯುತ್ತಿವೆ ವಿದ್ಯಾಸಂಸ್ಥೆಯ ಹೊರಗಡೆ ಇರುವ ಕೋಮು ಸಂಘಟನೆಗಳು ಈ ರೀತಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷಬೀಜವನ್ನು ಬಿತ್ತಿ ಸಾಮಾಜಿಕ ಸ್ವಾಸ್ಥವನ್ನು ಕೆಡಿಸುವ ಕೃತ್ಯದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಈ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕವಾಗಿ ಟ್ರೋಲ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಪ್ರ.ಕಾರ್ಯದರ್ಶಿ ಅಮಳ ರಾಮಚಂದ್ರ, ವಿ.ಎಚ್.ಎ. ಶಕೂರ್ ಹಾಜಿ, ಜೆರ್ಮಿ ಕುಟಿನ್ಹ ಮತ್ತು ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಉಪಸ್ಥಿತರಿದ್ದರು.