ಮಂಗಳೂರು: ತುಳುನಾಡಿನ ಕುವರಿಯರು ‘Incredible ಇಂಡಿಯಾದಲ್ಲಿ Impossible’ ಜರ್ನಿಯನ್ನು ಪೂರೈಸಿ ಬಂದಿದ್ದಾರೆ.
ದೂರದ ಗುಜರಾತ್‌ನ ಕಚ್ ಗೆ ಬೈಕ್ ರೈಡ್ ಮಾಡಿದ ಕರಾವಳಿ ಕುವರಿಯರ ಸಾಹಸ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕುವರಿಯರ ತಂಡ ಮಂಗಳೂರಿಗೆ ವಾಪಾಸ್ ಆಗಿದೆ.
13 ದಿನಗಳ ಕಾಲ ನಾಲ್ವರು ಯುವತಿಯರು ಬೈಕ್ ಪ್ರವಾಸ ಮಾಡಿ ವಾಪಾಸ್ಸಾಗಿದ್ದು ತಂಡವನ್ನು ಮಂಗಳೂರಿನಲ್ಲಿ ಅವರಿಗೆ ಆರತಿ ಬೆಳಗಿ, ಸಿಹಿ ಹಂಚಿ ಅದ್ದೂರಿಯಾಗಿ ಸ್ವಾಗತಿಸಿದರು. ಪಟಾಕಿ ಸಿಡಿಸಿ ಅವರ ಆಗಮನವನ್ನು ಸಂಭ್ರಮಿಸಿದರು.
ಮಂಗಳೂರಿನ ಬೈಕರ್ನಿ ಕ್ಲಬ್ 3,600 ಕಿಲೋ ಮೀಟರ್ ದೂರದ ಪ್ರಯಾಣವನ್ನು ಮಹಿಳಾ ಸಬಲೀಕರಣ ಜಾಗೃತಿಗಾಗಿ ಸಂಘಟಿಸಿತ್ತು.
ಡಿಸೆಂಬರ್ 24 ರಂದು ಮಂಗಳೂರಿನ ಸರ್ಕಿಟ್ ಹೌಸ್ ನಿಂದ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದ ಬಳಿಕ ಮಂಗಳೂರು ಬೈಕರ್ನಿಯ ಕ್ಲಬ್‌ನ ಸಂಸ್ಥಾಪಕಿ ಕೀರ್ತಿ ಉಚ್ಚಿಲ್, ಕರಾಟೆ ಪಟು ಪೂಜಾ ಜೈನ್, ದಿವ್ಯಾ ಪೂಜಾರಿ, ಸಾಫ್ಟ್‌ವೇರ್ ಇಂಜಿನಿಯರ್ ಅಪೂರ್ವ ಅವರು ಪ್ರಯಾಣ ಆರಂಭಿಸಿದ್ದರು.
ಬೈಕ್ ಪ್ರಯಾಣದ ಅನುಭವವನ್ನು ಹಂಚಿಕೊಂಡ ತಂಡ “ಇಂಡಿಯಾ- ಪಾಕಿಸ್ತಾನ್ ಗಡಿಗೆ ಹೋಗಿದ್ದೆವು. ಅದು ನಿರ್ಜನ ಪ್ರದೇಶವಾಗಿತ್ತು. ಗಡಿ ಭಾಗಕ್ಕೆ ತಲುಪಿದಾಗ ನಮಗೆ ಮೊಬೈಲ್ ಬಳಕೆ ಕೂಡ ನಿಷೇಧವಿತ್ತು. ರಾತ್ರಿಯ ಸಮಯದಲ್ಲಿ ಭಯ ಆಗಿತ್ತು. ಆದರೆ ಇಂಡಿಯಾ- ಪಾಕಿಸ್ತಾನ್ ಗಡಿ ನೋಡಿ ಬಂದದ್ದೇ ಒಂದು ಖುಷಿಯ ವಿಚಾರ. ಅಲ್ಲಿ ಬಿ.ಎಸ್.ಎಫ್ ಯೋಧರು ನಮಗೆ ತುಂಬಾ ಸಹಾಯ ಮಾಡಿದರು. ಈ ಒಂದು ಅನುಭವ ಅದು ತುಂಬಾ ಖುಷಿ ನೀಡಿದೆ. ಪ್ರತಿ ದಿನ ಹೊಸ ಹೊಸ ಸವಾಲುಗಳನ್ನು ಎದುರಿಸಿದ್ದೆವು, ಅತ್ಯಂತ ಕಠಿಣ ಪರಿಸ್ಥಿತಿ ಎಂದರೆ ಗುಜರಾತ್ ಹೈವೆ ಪಾಸಾಗುವಾಗ ಅಲ್ಲಿ ರಸ್ತೆಯೇ ಸರಿಯಿರಲಿಲ್ಲ. ಸುದೀರ್ಘ ಪ್ರಯಾಣ ಮತ್ತು ದೂರದ ಊರಿಗೆ ಏಕಾಂಗಿಯಾಗಿ ಬೈಕ್ ಚಲಾಯಿಸುವುದು ಒಂದು ಸವಾಲಾಗಿತ್ತು” ಎಂದಿದ್ದಾರೆ.
ಇನ್ನು ಪ್ರಾದೇಶಿಕ ಅಭಿಮಾನವನ್ನು ವ್ಯಕ್ತಪಡಿಸಿದ ಅವರು “ಅಲ್ಲಿಯ ಜನ ನಾವು ಮಂಗಳೂರಿನವರು ಎಂದು ಗೊತ್ತಾದಾಗ ನಮ್ಮ ಬಗ್ಗೆ ಹೆಮ್ಮೆ ಪಟ್ಟರು. ಭುಚ್‌ನಲ್ಲಿ ನಲ್ಲಿ ಕನ್ನಡ ಸಂಘದವರನ್ನು ನಮ್ಮನ್ನು ಆಮಂತ್ರಿಸಿ ಉತ್ತಮ ರೀತಿಯಲ್ಲಿ ಸತ್ಕರಿಸಿದರು. ಅಷ್ಟೇ ಅಲ್ಲದೆ ನಾವು ಮಾಡಿದ ಸಾಹಸಕ್ಕೆ ನಮ್ಮ ಜೊತೆ ಫೋಟೋ ತೆಗೆದುಕೊಳ್ಳಲು ಜನ ಮುಗಿಬಿದ್ದರು.
ಸೂರತ್‌ಗೆ ಹೋದಾಗ ಅಲ್ಲಿ ಮಂಗಳೂರಿನವರೇ ವಾಸ್ತವ್ಯ ಹೂಡಿದ್ದರು. ಅವರು ಸತ್ಕರಿಸಿದ ರೀತಿ ಕೂಡ ತುಂಬಾ ಚೆನ್ನಾಗಿತ್ತು. ತುಳು ಭಾಷೆಯನ್ನು ಮಾತಾಡುವವರನ್ನು ಕಂಡಾಗ ಮಾತ್ರ ಇನ್ನೂ ಸಂತೋಷವಾಗಿತ್ತು” ಎಂದು ಹೇಳಿದ್ದಾರೆ.