ಬೆಳ್ತಂಗಡಿ: ಆಟೋ ರಿಕ್ಷಾ ಚಾಲಕನೋರ್ವ ತನ್ನ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಮನೆಯ ಬೀಗದ ಕೀಯನ್ನು ಕದ್ದೊಯ್ದ ಕಳ್ಳರು ಮನೆಗೆ ನುಗ್ಗಿ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಿನ್ನೆ ಕೊಕ್ಕಡದಲ್ಲಿ ನಡೆದಿದೆ.
ಇಲ್ಲಿನ ಬಲಿಪಗುಡ್ಡೆ ನಿವಾಸಿ ಅಶೋಕ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅಶೋಕ್ ರಿಕ್ಷಾವನ್ನು ಕೊಕ್ಕಡದಲ್ಲಿ ನಿಲ್ಲಿಸಿ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಮನೆಯ ಬೀಗದ ಕೈಯನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರೆನ್ನಲಾಗಿದೆ.
ಅವರು ಪುತ್ತೂರಿನಿಂದ ಹಿಂದಿರುಗಿ ಬಂದು ನೋಡಿದಾಗ ರಿಕ್ಷಾದಲ್ಲಿ ಕೀ ಕಾಣೆಯಾಗಿತ್ತು. ಬಳಿಕ ಅವರು ಮನೆಗೆ ತೆರಳಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆಯ ಬೀಗ ತೆಗೆದು ಒಳನುಗ್ಗಿರುವ ಕಳ್ಳರು,
ಕಪಾಟಿನ ಬೀಗ ಒಡೆದು ಅದರೊಳಗಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.