ಮಹಾರಾಷ್ಟ್ರ: ಭೀಕರ ಕಾರು ಅಪಘಾತದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ವಿಜಯ್ ರಹಂಗ್ದಾಲೆ ಪುತ್ರ ಅವಿಷ್ಕಾರ್ ಸೇರಿದಂತೆ ಏಳು ಮಂದಿ ಮೆಡಿಕಲ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಮಹಾರಾಷ್ಟ್ರದಲ್ಲಿ ನಡೆದಿದೆ.
ವೈದ್ಯಕೀಯ ವಿದ್ಯಾರ್ಥಿಗಳು ಸೆಲ್ಸುರಾ ಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದಾಗ ದಿಢೀರನೆ ಕಾಡು ಪ್ರಾಣಿಯೊಂದು ಕಾರಿನ ಎದುರು ಬಂದಿದ್ದು, ಈ ಸಂದರ್ಭದಲ್ಲಿ ಕಾರಿನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಸೇತುವೆಯ ಕೆಳಕ್ಕೆ ಬಿದ್ದು ದುರಂತ ಸಂಭವಿಸಿರುವುದಾಗಿ ವಾರ್ಧಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಲ್ಕರ್ ತಿಳಿಸಿದ್ದಾರೆ.
ಘಟನೆಯಲ್ಲಿ ಬಿಜೆಪಿ ಶಾಸಕ ವಿಜಯ್ ಅವರ ಪುತ್ರ ಅವಿಷ್ಕಾರ್, ನೀರಜ್ ಚೌಹಾಣ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್, ಪವನ್ ಶಕ್ತಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.