ಕುಂದಾಪುರ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಕಿದ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರೇ ಸ್ವತಃ ಹಾಕಿ ಹೊರಕಳುಹಿಸಿದ ಘಟನೆ ಇಂದು ನಡೆದಿದೆ.
ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಹಿಜಾಬ್ ವಿವಾದ ನಿನ್ನೆಯಿಂದ ಕುಂದಾಪುರದ ಸರ್ಕಾರಿ ಕಾಲೇಜಿಗೂ ಹಬ್ಬಿತ್ತು. ಈ ಮಧ್ಯೆ ಕುಂದಾಪುರ ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿ ಸಂಧಾನ ನಡೆಸಲು ಪ್ರಯತ್ನ ನಡೆಸಿದ್ದರು. ಆದರೆ ಅದು ಸಫಲವಾಗಿರಲಿಲ್ಲ.
ಇಂದು ಬೆಳಗ್ಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಈ ವೇಳೆ ಕಾಲೇಜಿನ ಗೇಟ್ ಬಳಿ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದಿದ್ದಾರೆ. ಹಿಜಾಬ್ ಕಳಚಿ ಕ್ಲಾಸಿಗೆ ಬರುವುದಾದರೆ ಬನ್ನಿ ಎಂದು ಹೇಳಿ ಗೇಟ್ ಹಾಕಿದ್ದಾರೆ. ಈ ವೇಳೆ ಪ್ರಾಂಶುಪಾಲರ ಜೊತೆ ವಿದ್ಯಾರ್ಥಿನಿಯರಿಗೆ ವಾಗ್ವಾದವಾಗಿದೆ.
ಈ ಹಿಂದೆ ಉಡುಪಿಯಲ್ಲಿ ನಡೆದ ಹಿಜಾಬ್ ವಿವಾದದ ವೇಳೆ ರಾಜ್ಯ ಸರಕಾರ ಹೊರಡಿಸಿದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರ ಎದುರು ವಾದ ಮಂಡಿಸಿದ್ದಾರೆ.
ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಪ್ರತಿಕ್ರಿಯಿಸಿ ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದ್ದಾರೆ. ಜೊತೆಗೆ ಸ್ಥಳೀಯ ಶಾಸಕರು ಸಭೆಯ ವೇಳೆ ಏನು ಹೇಳಿದ್ದಾರೆ ಅದರ ಪ್ರಕಾರ ನಾವು ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
ಉಡುಪಿಯ ಹಿಜಾಬ್ ವಿವಾದದ ವೇಳೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಿನ್ನೆ ಇದೇ ಕಾಲೇಜಿಗೆ ಕೇಸರಿ ಶಾಲು ಹಾಕಿ ಹಲವು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು.