ಸವಣೂರು: ಸರಕಾರಿ ಶಾಲೆಯ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವ ಘಟನೆ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ನಡೆದಿದೆ.
ಈ ಮಧ್ಯೆ ಸಾಮಾಹಿಕ ನಮಾಜ್ಗೆ ಸಂಬಂಧಿಸಿದ ವೀಡಿಯೋ ವಾಟ್ಸಪ್ನಲ್ಲಿ ಹರಿದಾಡುತ್ತಿದ್ದು, ನಮಾಜ್ ಮಾಡಿರುವ ಘಟನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡಿ ಅಂಕತ್ತಡ ಶಾಲೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಮಾಝ್ ಮಾಡಿದ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ನಡೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ಶಾಲಾ ಮುಖ್ಯಸ್ಥರಿಗೆ ಈ ವಿಚಾರವನ್ನು ಈ ಹಿಂದೆಯೇ ಗಮನಕ್ಕೆ ತರಲಾಗಿದ್ದರೂ ಮತ್ತೆ ಮುಂದುವರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಹೆತ್ತವರು ಪೋಷಕರ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಹೀಗಾಗಿ ಶಿಕ್ಷಕರು ಮಕ್ಕಳನ್ನು ಹೆತ್ತವರು ಮಸೀದಿಗೆ ಕರೆದುಕೊಂಡು ಹೋಗಿ ವಾಪಸು ಶಾಲೆಗೆ ಬಿಡುವಂತೆ ಶಾಲಾ ಮುಖ್ಯಸ್ಥರು ತಿಳಿಸಿದ್ದರು. ಆದರೆ ಮಕ್ಕಳ ಹೆತ್ತವರು ಕರೆದುಕೊಂಡು ಹೋಗಲು ಬಾರದ ಹಿನ್ನೆಲೆಯಲ್ಲಿ ಶುಕ್ರವಾರದಂದು ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಮಾಝ್ ಮಾಡಿದ್ದಾರೆ ಎಂದು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯತ್ತ ದೌಡಾಯಿಸಿದ್ದು, ಬೆಳ್ಳಾರೆ ಪೊಲೀಸರೂ ಶಾಲೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.