ಉಪ್ಪಿನಂಗಡಿ: ಎರಡು ತಿಂಗಳ ಹಿಂದೆ ಮೀನು ವ್ಯಾಪಾರಿಗಳಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳ ಪೈಕಿ ಈಗಾಗಲೇ ಬಂಧಿತ 6 ಮಂದಿಗೆ ಜಾಮೀನು ಮಂಜೂರುಗೊಂಡಿದ್ದು, ಇದೀಗ ಉಳಿದ 7 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಡಿಸೆಂಬರ್ ತಿಂಗಳಲ್ಲಿ ಉಪ್ಪಿನಂಗಡಿ ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್‌ನಲ್ಲಿ ಮೀನು ವ್ಯಾಪಾರಿಗಳಾದ ಕಜೆಕ್ಕಾರಿನ ಮೋಹನ್‌ದಾಸ್ ಮತ್ತು ಅಶೋಕ್ ಮತ್ತು ಗ್ರಾಹಕರೊಬ್ಬರಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿ 6 ಮಂದಿಯನ್ನು ಬಂಧಿಸಿದ್ದರು.
ಬಂಧಿತ 6 ಮಂದಿಗೂ ನ್ಯಾಯಾಲಯದಲ್ಲಿ ಜಾಮೀನು ಮಂಜೂರುಗೊಂಡಿತ್ತು. ಉಳಿದಂತೆ ತಲೆಮರೆಸಿಕೊಂಡಿದ್ದ 7 ಮಂದಿ ಆರೋಪಿಗಳಾದ ಬಿ.ಕೆ ಹಮೀದ್ ಕಡವಿನಬಾಗಿಲು, ಇಕ್ಬಾಲ್ ಕೆಂಪಿ, ತಸ್ಲೀನ್ ಕುಪ್ಪೆಟ್ಟಿ, ಅಜೀಜ್ ಕರಾಯ, ಸಿದ್ದಿಕ್ ನೆಲ್ಯಾಡಿ, ರಫೀಕ್ ನಟ್ಟಿಬೈಲು, ಅಬ್ದುಲ್ ಖಾದರ್ ಯಾನೆ ಮುಸ್ತಾಫ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ಮಂದಿಗೂ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ಪರ ವಕೀಲರಾದ ಅಶ್ರಫ್ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದರು.