ಶಿವಮೊಗ್ಗ: ಹಿಂದೂ ಕಾರ್ಯಕರ್ತನೊರ್ವನ ಭೀಕರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸೀಗೆಹಟ್ಟಿ ನಿವಾಸಿ ಹರ್ಷ (26) ಕೊಲೆಯಾದ ಕಾರ್ಯಕರ್ತ.
ಶಿವಮೊಗ್ಗ ನಗರದ ಕಾಮತ್ ಪೆಟ್ರೊಲ್ ಬಂಕ್ ಸಮೀಪ ಹರ್ಷನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಡೊಡ್ಡಪೇಟೆ ಠಾಣಾ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ಹರ್ಷ ಹಿಂದೂ ಸಂಘಟನೆಯೊಂದರ ಸಕ್ರೀಯ ಕಾರ್ಯಕರ್ತನಾಗಿದ್ದ.
ಮೆಗ್ಗಾನ್ ಆಸ್ಪತ್ರೆಯ ಸುತ್ತ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದು, ಪೊಲೀಸರು ನೆರೆದಿರುವ ಜನರಿಗೆ ಮೈಕ್ ಮೂಲಕ ಎಚ್ಚರಿಕೆ ನೀಡಿ ಚದುರಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಜಿಲ್ಲಾ ಎಸ್ ಪಿ ಲಕ್ಷ್ಮೀ ಪ್ರಸಾದ್ ರವರು ಭೇಟಿ ನೀಡಿ ಘಟನೆಯ ಬಗ್ಗೆ ವಿಚಾರಿಸುತ್ತಿದ್ದಾರೆ.
ಶಿವಮೊಗ್ಗ ನಗರದಾದ್ಯಂತ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ :
ನಗರ ವ್ಯಾಪ್ತಿಯಲ್ಲಿ ಫೆ. 21 ರಂದು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೀಗೆಹಟ್ಟಿ, ಕ್ಲರ್ಕ್ ಪೇಟೆ, ರವಿವರ್ಮ ಬೀದಿ ಸೇರಿದಂತೆ ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.