ಶಿವಮೊಗ್ಗ: ಕಳೆದ ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆಯಾಗಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ರವರು ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಬಿಜೆಪಿ ಪಕ್ಷದ ಕಡೆಯಿಂದ 10 ಲಕ್ಷ ರೂಪಾಯಿಗಳ ಚೆಕ್ ಅನ್ನು ಹರ್ಷ ಪೋಷಕರಿಗೆ ಹಸ್ತಾಂತರ ಮಾಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಟೀಲ್, ಹರ್ಷ ಕುಟುಂಬಕ್ಕೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಘಟನೆಯ ಸಂಪೂರ್ಣ ವರದಿ ಕೇಳಿದ್ದೇವೆ. ಈ ಘಟನೆ ಗೆ ಸಂಬಂಧಿಸಿದವರ ಬಂಧನ ಮಾಡಿದ್ದೇವೆ. ಇದರ ಹಿಂದಿರುವ ಕಾಣದ ಶಕ್ತಿಗಳನ್ನು ಮಟ್ಟ ಹಾಕೋ ಕೆಲಸ ಮಾಡ್ತೇವೆ. ಮತ್ತೆ ಈ ರೀತಿಯ ಘಟನೆ ನಡೆಯದಂತೆ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಮೂರುವರೆ ವರ್ಷಗಳ ನಮ್ಮ ಅಡಳಿತದಲ್ಲಿ ಇದೊಂದು ಘಟನೆ ನಡೆದಿದೆ. ಇದು ನಡೆಯಬಾರದಿತ್ತು, ಮುಂದೆ ನಡಿಯದ ಹಾಗೇ ನೋಡಿಕೊಳ್ಳುತ್ತೇವೆ. ಆರೋಪ ಕೇಳಿ ಬಂದಿರುವ ಸಂಘಟನೆಗಳನ್ನು ಬ್ಯಾನ್ ಮಾಡಲು ಅದರದ್ದೇ ಆದಂತಹ ಮಾನದಂಡಗಳಿವೆ ಎಂದರು.
ಸಚಿವ ಕೆಎಸ್ ಈಶ್ವರಪ್ಪ ಮಾತನಾಡಿ, ಹರ್ಷ ಕಗ್ಗೊಲೆ ಆಗುತ್ತೆ ಅಂತ ಕಲ್ಪನೆಯೂ ಇರಲಿಲ್ಲ. ಸರ್ಕಾರ ಯಾರು ಗೂಂಡಾಗಳಿದ್ದಾರೆ ಅವ್ರ ಬಂಧನ ಮಾಡಿದೆ. ಇಡೀ ರಾಜ್ಯದ ಹಿಂದೂ ಸಮಾಜ ಹರ್ಷನ ಕೊಲೆಯನ್ನು ಖಂಡಿಸುತ್ತಿದೆ. ಕುಟುಂಬಕ್ಕೆ ಆದ ಅನ್ಯಾಯವನ್ನು ಬಿಡೋದಿಲ್ಲ ಅಂತಾ ಸಿಎಂ ಹೇಳಿದ್ದಾರೆ. ಕುಟುಂಬಕ್ಕೆ ಏನೇನೂ ಪರಿಹಾರ ಕೊಡಬೇಕು ಅದನ್ನು ಕೊಡೋ ಭರವಸೆ ಸಿಎಂ ನೀಡಿದ್ದಾರೆ ಎಂದರು.
ಹರ್ಷ ಕೊಲೆ ಹಿಂದೆ ದೇಶದ್ರೋಹಿಗಳ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕು. ಮತ್ತೆ ಯಾವನೂ ಕೂಡ ಈ ರೀತಿಯ ಘಟನೆಗೆ ಕೈ ಹಾಕಬಾರದು. ಅಶಾಂತಿ ಮೂಡಿಸುವ ಸಲುವಾಗಿ ಈ ರೀತಿ ಸಂಚು ರೂಪಿಸಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಬೇಕಿತ್ತು ಅದನ್ನು ಮಾಡಿಲ್ಲ. ನಾವು ಅದರ ನಿರೀಕ್ಷೆ ಇಟ್ಟುಕೊಂಡಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿ ಅವರ ಶಾಸಕರ ಮನೆಗೆ ಬೆಂಕಿ ಇಟ್ಟಾಗ ಅವರ ಪರ ನಿಲ್ಲಲಿಲ್ಲ. ಹಿಂದೂ ಕಾರ್ಯಕರ್ತನ ಸಾವು ವ್ಯರ್ಥವಾಗಲು ಬಿಡೋದಿಲ್ಲ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಗಂಭೀರವಾಗಿ ತೆಗೆದುಕೊಂಡ ನಂತರ ಆರೋಪಿಗಳು ಅರೆಸ್ಟ್ ಆಗಿದ್ದಾರೆ ಎಂದು ವಿಜಯೇಂದ್ರ ಹೇಳಿದ್ರು.