ಬೆಳ್ತಂಗಡಿ: ಗರ್ಭಿಣಿ ಮಹಿಳೆಯೊಬ್ಬರನ್ನು ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿಯಿಂದ ಮಂಗಳೂರಿಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಡು ಹೋಗುತ್ತಿದ್ದ ವೇಳೆ ಮಾರ್ಗ ಮದ್ಯೆಯೇ ಪ್ರಸವವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮಹಾಬಲ ಎಂಬವರ ಪತ್ನಿ ಏಳು ತಿಂಗಳ ಗರ್ಭಿಣಿ ಹರಿಣಾಕ್ಷಿ ಎಂಬವರನ್ನು ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸ್ಸು ಮಾಡಲಾಗಿತ್ತು.
ಮಂಗಳೂರಿನ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಇನ್ನೂ 7 ತಿಂಗಳು ಪೂರ್ತಿಯಾಗದ ಹರಿಣಾಕ್ಷಿಯವರಿಗೆ ಮಾರ್ಗ ಮಧ್ಯೆಯೇ ಆಂಬ್ಯುಲೆನ್ಸ್ ನಲ್ಲಿಯೇ ಪ್ರಸವವಾಗಿದ್ದು, ಗಂಡು ಮಗು ಜನಿಸಿದೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದು, ಇಬ್ಬರನ್ನೂ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.