ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಟೂರ್ನಿ ಎರಡು ವರ್ಷಗಳ ನಂತರ ಭಾರತಕ್ಕೆ ಮರಳಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟಿ20 ಕ್ರಿಕೆಟ್ ಟೂರ್ನಿ 15ನೇ ಆವೃತ್ತಿಗೆ ಕಾಲಿಟ್ಟಿದ್ದು, ಮಿನುಮಿನುಗುವ ಈ ರೋಚಕ ಕಾದಾಟಕ್ಕೆ ಇಂದಿನಿಂದ ಚಾಲನೆ ಸಿಗಲಿದೆ.
ಹಲವು ಬದಲಾವಣೆಗಳೊಂದಿಗೆ ಹೊಸ ನಾಯಕ, ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಐಪಿಎಲ್ ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇಂದು ರವೀಂದ್ರ ಜಡೇಜಾ (Ravindra Jadeja) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಕಾದಾಡುವ ಮೂಲಕ ಈ ಅದ್ಧೂರಿ ಲೀಗ್ಗೆ ಭರ್ಜರಿ ಚಾಲನೆ ಸಿಗಲಿದೆ.
ಇಬ್ಬರೂ ಹೊಸ ನಾಯಕರಾಗಿರುವುದರಿಂದ ಈ ಪಂದ್ಯ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ ಈ ಹೈವೋಲ್ಟೇಜ್ ಕದನಕ್ಕೆ ಸಂಪೂರ್ಣ ಸಜ್ಜಾಗಿ ನಿಂತಿದೆ. ಅಲ್ಲದೆ ಮೈದಾನದಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಲು ಶೇ. 25ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದು, 74 ಪಂದ್ಯಗಳ ಕಾದಾಟದ ರುಚಿ ಸವಿಯಲು ಅಭಿಮಾನಿಗಳಂತು ಕಾದು ಕುಳಿತಿದ್ದಾರೆ.
ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ 2020ರಲ್ಲಿ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿತ್ತು. 2021ರ ಏಪ್ರಿಲ್‌ನಲ್ಲಿ ಭಾರತದ ನಡೆಯುತ್ತಿದ್ದ ಟೂರ್ನಿಯನ್ನು ಕೋವಿಡ್ ಎರಡನೇ ಅಲೆ ವ್ಯಾಪಿಸಿದ್ದ ಕಾರಣಕ್ಕಾಗಿ ಸ್ಥಗಿತಗೊಳಿಸಿ, ಉಳಿದ ಭಾಗವನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ತಿಳಿಯಾಗಿರುವುದರಿಂದ ಟೂರ್ನಿಯನ್ನು ಭಾರತದ ನೆಲದಲ್ಲಿಯೇ ಪೂರ್ತಿಗೊಳಿಸುವ ವಿಶ್ವಾಸದಲ್ಲಿ ಆಯೋಜಕರು ಇದ್ದಾರೆ. ಆದರೂ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊರೊನಾ ನಿಯಮ:
ಕಳೆದ ಆವೃತ್ತಿಯಲ್ಲಿ ಪ್ಲೇಯಿಂಗ್ ಇಲೆವೆನ್‌ನ ಆಟಗಾರರಿಗೆ ಕೊರೊನಾ ಸೋಂಕು ತಗುಲಿದರೆ ಪಂದ್ಯವನ್ನು ಮುಂದೂಡಲಾಗುತ್ತಿತ್ತು. ಮುಂದೂಡಿಕೆಯ ಬಳಿಕವೂ ಆಡಲು ಸಾಧ್ಯವಾಗದಿದ್ದರೆ ಎದುರಾಳಿ ತಂಡಕ್ಕೆ ವಿಜಯದ ಶ್ರೇಯ ಲಭಿಸುತ್ತಿತ್ತು. ಆದರೆ ಈ ನಿಯಮವನ್ನು ರದ್ದುಗೊಳಿಸಲಾಗಿದೆ. ಆಗ ಐಪಿಎಲ್ ತಾಂತ್ರಿಕ ಸಮಿತಿ ಮುಂದಿನ ನಿರ್ಧಾರ ಪ್ರಕಟಿಸಲಿದೆ. ಪಂದ್ಯವನ್ನು ಮರು ಸಂಘಟಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಬಯೋಬಬಲ್ ಉಲ್ಲಂಘನೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಇನ್ನು ಪಂದ್ಯ ವೀಕ್ಷಣೆ ಮಾಡಲು ತೆರಳುವ ಪ್ರೇಕ್ಷಕರು ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು, ವ್ಯಾಕ್ಸಿನ್ ಪಡೆದುಕೊಂಡಿರುವ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ಎರಡು ಡಿಆರ್‌ಎಸ್:
ಈ ಬಾರಿಯ ಐಪಿಎಲ್‌ನಲ್ಲಿ ಇನ್ನಿಂಗ್ಸ್ ಒಂದರಲ್ಲಿ ಪ್ರತೀ ತಂಡಕ್ಕೆ ತಲಾ 2 ಡಿಆರ್‌ಎಸ್ ಆಯ್ಕೆ ಲಭಿಸಲಿದೆ. ಈ ಹಿಂದೆ ಕೇವಲ ಒಂದೇ ಡಿಆರ್‌ಎಸ್ ಅವಕಾಶವಿತ್ತು. ಅಂಪೈಯರಿಂಗ್ ದೋಷಗಳಿಂದ ಮುಕ್ತಿ ಪಡೆಯಲು ಈ ಬದಲಾವಣೆ ತರಲಾಗಿದೆ. ಇದರಿಂದ ತಂಡಗಳಿಗೆ ಲಾಭವಾಗಲಿದೆ. ಆದರೆ ಪಂದ್ಯ ನಡೆಯುವ ಸಮಯವೂ ಹೆಚ್ಚಲಿದೆ. ಇನ್ನು ಇತ್ತೀಚೆಗೆ ಎಂಸಿಸಿ ಪರಿಷ್ಕೃತಗೊಳಿಸಿದ ಕೆಲ ನಿಯಮಗಳನ್ನು ಐಪಿಎಲ್‌ನಲ್ಲಿ ಅವಳಡಿಸಲಾಗಿದೆ. ಪ್ರಮುಖವಾಗಿ ಕ್ಯಾಚ್ ನೀಡಿ ಬ್ಯಾಟರ್ ಹೊರನಡೆದಾಗ ಹೊಸದಾಗಿ ಕ್ರೀಸ್‌ಗಿಳಿಯುವ ಆಟಗಾರನೇ ಸ್ಟೆ್ರೖಕ್ ಪಡೆಯಬೇಕು ಎನ್ನುವ ನಿಯಮವನ್ನು ಜಾರಿ ಮಾಡಲಾಗುತ್ತಿದೆ.
ಎರಡು ಗುಂಪು:
‘ಎ’ ಗುಂಪಿನ ತಂಡಗಳು
ಮುಂಬೈ ಇಂಡಿಯನ್ಸ್ (ಎಂಐ)
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)
ರಾಜಸ್ಥಾನ್ ರಾಯಲ್ಸ್ರ್ (ಆರ್‌ಆರ್)
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)
ಲಖನೌ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ)
‘ಬಿ’ ಗುಂಪಿನ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)
ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್)
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್)
ಗುಜರಾತ್ ಟೈಟನ್ಸ್ (ಜಿಟಿ)
ಒಟ್ಟು 74 ಪಂದ್ಯಗಳು:
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 20 ಲೀಗ್ ಪಂದ್ಯಗಳು ನಡೆದರೆ, ಅಷ್ಟೇ ಪಂದ್ಯಗಳಿಗೆ ಬ್ರಬೋರ್ನ್ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಡಿ.ವೈ ಪಾಟಿಲ್ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿದ್ದು, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಎಂಸಿಎಗೆ 15 ಪಂದ್ಯಗಳನ್ನು ನೀಡಲಾಗಿದೆ.
ನಾಕ್‌ಔಟ್ ಹಂತದ ಪಂದ್ಯಗಳನ್ನು ಎಲ್ಲಿ ಆಯೋಜಿಸುವುದು..? ಎಂಬುದರ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಬಿಸಿಸಿಐ ಮಾಹಿತಿ ನೀಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಕ್‌ಔಟ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಮೇ 29ಕ್ಕೆ ಫೈನಲ್ ಪಂದ್ಯ ಏರ್ಪಡಿಸಲಾಗಿದೆ.