ಬೆಳಗಾವಿ: ಸಚಿವ ಕೆ.ಎಸ್ ಈಶ್ವರಪ್ಪ ಅವರಿಂದ 40 ಪರ್ಸೆಂಟೇಜ್ ಕಮಿಷನ್ ಕೇಳಿದ ಆರೋಪ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪ ಮಾಡಿದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಡೆತ್ ನೋಟ್ ಬರೆದಿಟ್ಟು, ತಡರಾತ್ರಿ ಮಾಧ್ಯಮಪತ್ರಿನಿಧಿಗಳಿಗೆ ತನ್ನ ಡೆಟ್ ನೋಟ್ ಕಳಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬೆದರಿಕೆ ಹಾಕಿದ್ದರು. ಸದ್ಯ ಅವರು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಡೆಟ್ ನೋಟ್ ಕಳಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದ ಸಂತೋಷ್ ಅವರು, ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಡೆಟ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಸಚಿವರ ವಿರುದ್ಧ ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು , ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಡೆತ್ ನೋಟ್ ವಿಚಾರ ತಿಳಿದು ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಸಂತೋಷ ಪಾಟೀಲ್ ಹುಡುಕಾಟ ನಡೆಸಿದ್ದರು. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮಕ್ಕೆ ಭೇಟಿ ನೀಡಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಉಡುಪಿ ಪೊಲೀಸರು ಸಂತೋಷ್ ಅವರ ಲೊಕೇಶನ್ ಪತ್ತೆಯಾಗಿದೆ ಎಂಬ ಮಾಹಿತಿ ನೀಡಿದ್ದರು.
ಲೊಕೇಶನ್ ಆಧಾರವಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಉಡುಪಿಯ ಶಾಂಭವಿ ಲಾಡ್ಜಿನಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸದ್ಯ ಸಂತೋಷ್ ಮೃತದೇಹ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ನ ರೂಮ್ ನಂಬರ್ 207ರಲ್ಲಿ ಪತ್ತೆಯಾಗಿದೆ.
ಇದೇ ಹೋಟೆಲ್ ರೂಮ್ನ ಪಕ್ಕದ ಕೊಠಡಿಯಲ್ಲಿ ಸಂತೋಷ್ರ ಇಬ್ಬರೂ ಗೆಳೆಯರು ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಉಡುಪಿ ನಗರ ಠಾಣಾ ಪೊಲೀಸರು, ಎಸ್ಪಿ ವಿಷ್ಣುವರ್ಧನ್, ಎಎಸ್ಪಿ ಸಿದ್ದಲಿಂಗಪ್ಪ ಹಾಗೂ ಕೆಎಂಸಿ ಮಣಿಪಾಲದ ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.