ಮಕ್ಕಳಿಗೆ ಒಳ್ಳೇ ಸಂಬಂಧ ತರಬೇಕು ಎಂಬುದು ಪೋಷಕರ ಕನಸು. ಸ್ನೇಹಿತರು, ಸಂಬಂಧಿಕರ ಮೂಲಕ ಎಷ್ಟೇ ಹುಡುಕಿದರೂ ಮಗಳಿಗೆ ಒಂದೊಳ್ಳೇ ಸಂಬಂಧ ಬರಲಿಲ್ಲ ಎಂದರೆ ಪೋಷಕರು ಮ್ಯಾಟ್ರಿಮೋನಿ ಮೊರೆ ಹೋಗುತ್ತಾರೆ. ಹೀಗೆ ತಂದೆಯೋರ್ವ ತನ್ನ ಮಗಳಿಗಾಗಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಒಳ್ಳೇ ಪ್ರೊಫೈಲ್ ಇರೋ ಹುಡುಗನನ್ನು ಹುಡುಕಿದ್ದರು.
ಖುದ್ದು ತಂದೆಯೇ ಹುಡುಗನ ಫೋಟೋ ಮತ್ತಿತ್ಯಾದಿ ವಿವರಗಳನ್ನು ಮಗಳಿಗೆ ವಾಟ್ಸಪ್ ಮಾಡಿದ್ರು. ಹುಡುಗ ಒಪ್ಪಿಗೆ ಆದ್ರೆ ಒಂದು ಮಸೇಜ್ ಹಾಕು ಎಂದು ಮಗಳಿಗೆ ಹೇಳಿದ್ದರು. ಆದರೆ, ತಂದೆ ಕಳಿಸಿದ್ದ ಹುಡುಗನ ಪ್ರೊಫೈಲ್ ನೋಡಿದ್ದ ಮಗಳು ಮಾಡಿದ್ದೇ ಬೇರೆ.
ಹೌದು, ಮದುವೆಗೆ ಒಪ್ಪಿಗೆ ನೀಡು ಅಂದ್ರೆ ಮಗಳು ಹುಡುಗನಿಗೆ ಜಾಬ್ ಆಫರ್ ಕೊಟ್ಟಿದ್ದಾಳೆ. ಇಂಟರ್ವ್ಯೂ ಲಿಂಕ್ ಕಳಿಸಿ ಕೂಡಲೇ ಸಂದರ್ಶನಕ್ಕೆ ಬನ್ನಿ ಎಂದು ಕರೆದಿದ್ದಾಳೆ. ಹೀಗೆ ಮಾಡಿದ್ದು ಮತ್ಯಾರು ಅಲ್ಲ ಬೆಂಗಳೂರು ಮೂಲದ ಯುವತಿ ಉದಿತಾ ಪಾಲ್.

ಈಕೆ ಫಿನ್ಟೆಕ್ ಕಂಪನಿಯೊಂದರ ಸಹ ಸಂಸ್ಥಾಪಕಿ. ತಂದೆ ಕಳಿಸಿದ ಹುಡುಗನ ಅನುಭವ ನೋಡಿ ಕೂಡಲೇ ಹೇಗಾದರೂ ತನ್ನ ಕಂಪನಿಗೆ ನೇಮಕ ಮಾಡಿಕೊಳ್ಳಬೇಕು ಎಂದು ಚಿಂತಿಸಿದ್ದಳು.
ಇನ್ನು, ತಂದೆ ಮಗಳಿಗೆ ಮ್ಯಾಟ್ರಿಮೋನಿ ಸೈಟ್ನಿಂದ ಯಾರು ಉದ್ಯೋಗಕ್ಕೆ ಜನರನ್ನು ಹುಡುಕೋದಿಲ್ಲ. ನೀನು ಹೇಗೆ ಮಾಡಿದೆ..? ಈಗ ನಾನು ಹುಡುಗನ ತಂದೆಗೆ ಏನು ಉತ್ತರ ಕೊಡಲಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಗಳ ಉತ್ತರ ಹೀಗಿದೆ.. ವ್ಯಕ್ತಿಗೆ ಫಿನ್ಟೆಕ್ ವಿಭಾಗದಲ್ಲಿ 7 ವರ್ಷ ಅನುಭವ ಇದೆ. ಹಾಗಾಗಿ ಹೀಗೆ ಮಾಡಿದೆ ಎಂದಿದ್ದಾರೆ.

ಇನ್ನು, ಉದಿತಾ ತನ್ನ ತಂದೆಯೊಂದಿಗೆ ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ಸ್ ಶೇರ್ ಮಾಡಿದ್ದಾರೆ. ಇವರ ಟ್ವೀಟ್ ಈಗ ಭಾರೀ ವೈರಲ್ ಆಗಿದೆ. ಹುಡುಗ ವರ್ಷಕ್ಕೆ 62 ಲಕ್ಷ ರೂ. ಪ್ಯಾಕೇಜ್ ಕೇಳಿದ್ದಾಗಿ, ಇದಕ್ಕೆ ಕಂಪನಿ ರಿಜೆಕ್ಟ್ ಮಾಡಿರುವುದಾಗಿ ಕೂಡ ಉದಿತಾ ಬರೆದುಕೊಂಡಿದ್ದಾರೆ.