ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಬಾವಿಗೆ ಬಿದ್ದ ಘಟನೆ ಬೇಕಲ ಸಮೀಪದ ಪೂಚಕ್ಕಾಡ್ ಎಂಬಲ್ಲಿ ನಡೆದಿದ್ದು, ಕಾರಲ್ಲಿದ್ದ ನಾಲ್ವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ನಿನ್ನೆ ಸಂಜೆ ಈ ಘಟನೆ ನಡೆದಿದೆ. ಬಾವಿಯಲ್ಲಿ ಸಿಲುಕಿದ್ದ ನಾಲ್ವರನ್ನು ಪರಿಸರವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದರು.
ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆವರಣ ಇಲ್ಲದ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ಸ್ಥಳೀಯ ಯುವಕರು ಕಾರಿನಿಂದ ಹೊರತೆಗೆದು ಮೇಲಕ್ಕೆತ್ತಿದರು.
ಓರ್ವನನ್ನು ಅಗ್ನಿಶಾಮಕ ದಳದ ಸಿಬಂದಿಗಳು ರಕ್ಷಿಸಿದರು. ಬಾವಿಗೆ ಬಿದ್ದ ಕಾರು ಅರ್ಧ ಮುಳುಗಿದ ಸ್ಥಿತಿಯಲ್ಲಿತ್ತು. ಕಾರಿನ ಗಾಜು ಹಾಗೂ ಬಾಗಿಲು ಒಡೆದು ನಾಲ್ವರನ್ನು ಹೊರೆತೆಗೆದು ಮೇಲಕ್ಕೆ ತಂದು ರಕ್ಷಿಸಲಾಗಿದೆ.