ವಿಟ್ಲ: ಹತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಆಕೆಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಅವರ ಪುತ್ರಿ ನೇಣಿಗೆ ಶರಣಾದ ವಿದ್ಯಾರ್ಥಿನಿ.
ಆತ್ಮಿಕಾ ಸಾವಿಗೆ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಕಾರಣ ಎಂದು ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂಜೀವ ರವರು ತಮ್ಮ ಕುಟುಂಬದೊಂದಿಗೆ ಕನ್ಯಾನ ಗ್ರಾಮದ ಕಣಿಯೂರು ಮಸೀದಿ ಹಿಂಭಾಗದಲ್ಲಿನ ದಿ.ಸುಲೈಮಾನ್ ಫೈಝಿ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇ.5 ರಂದು ಎಂದಿನಂತೆ ಪತ್ನಿ ಕೂಲಿ ಕೆಲಸಕ್ಕೆಂದು ಹೋಗಿದ್ದು. ಅವರ ಮಗ ಕಾರ್ತಿಕನು ಔಷಧ ತರಲು ಹೋಗಿದ್ದು. ಮಗಳು ಮನೆಯಲ್ಲಿ ಒಬ್ಬಳೇ ಇದ್ದಳು. ಸಂಜೀವ ಮತ್ತು ಅವರ ಪತ್ನಿ ಸುಮಾರು 11.15 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದು. ಸಂಜೀವ ರವರು ಮನೆಯ ಹಿಂಭಾಗ ಹೋದಾಗ ಅವರ ಪತ್ನಿ ಮನೆಯ ಒಳಗೆ ಹೋದವಳು ಜೋರಾಗಿ ಬೊಬ್ಬೆ ಹಾಕಿದರು. ಕೂಡಲೇ ಸಂಜೀವ ರವರು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ನಡುವಿನ ಕೋಣೆಯಲ್ಲಿ ಮಗಳು ಆತ್ಮೀಕಾಳು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು.
ಈಕೆ ಮೃತಪಡಲು ಕಾರಣವೇನೆಂದರೆ ಕಣಿಯೂರು ತಲೆಕ್ಕಿ ಎಂಬಲ್ಲಿಯ ಸಾಹುಲ್ ಹಮೀದ್@ಕುಟ್ಟ ಎಂಬಾತನನ್ನು ಪ್ರೀತಿಸುತ್ತಿದ್ದ ವಿಚಾರ ಸಂಜೀವ ರವರಿಗೆ ತಿಳಿದು ಮಗಳು ದೀರ್ಘ ಕಾಲ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಅವಳ ಮೊಬೈಲನ್ನು ಪರಿಶೀಲಿಸಲಾಗಿ ಮೊಬೈಲ್ ನಲ್ಲಿ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಎಂಬಾತನೊಂದಿಗೆ ಮಾತನಾಡುತ್ತಿರುವ ಮಗಳ ಮೊಬೈಲ್ ನ್ನು ತೆಗೆದಿರಿಸಿ ಆಕೆಗೆ ಬುಧ್ಧಿವಾದ ಹೇಳಿದ್ದು ಸಾಹುಲ್ ಹಮೀದ್ ಹಾಗೂ ಆತನ ಅಣ್ಣನನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಆತನಿಗೆ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು.
ಆದರೂ ಕೂಡ ಸಾಹುಲ್ ಹಮೀದ್ ಪದೇ ಪದೇ ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯ ಮನೆಗೆ ಬಂದು ಮಗಳನ್ನು ಭೇಟಿಯಾಗಿ ಮಗಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಅಲ್ಲದೇ ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ನೀನು ಬಾ. ನೀನು ಬರುವುದಿಲ್ಲವಾದರೆ ಸಾಯಿ ಎಂದು ಸಾಹುಲ್ ಹಮೀದ @ ಕುಟ್ಟ ಹೇಳಿದ್ದ ಎಂದು ಮಗಳು ಸಂಜೀವ ಹಾಗೂ ಅವರ ಪತ್ನಿಯ ಬಳಿ ಹೇಳಿಕೊಂಡಿದ್ದಳು. ಅದಕ್ಕೆ ನಿನ್ನ ವಿಷಯಕ್ಕೆ ಆತನು ಬಾರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಮಗಳನ್ನು ಸಮಾದಾನಪಡಿಸಿದ್ದರು. ಅದರಂತೆ ಮನೆಯಲ್ಲಿದ್ದ ಬಾಲಕಿಯನ್ನು ಸಾಹುಲ್ ಹಮೀದ್ ಅವಳ ಮನಸ್ಸು ಕೆಡಿಸಿ ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದುದರಿಂದ ಹಾಗೂ ನೀನು ನಿನ್ನ ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ನೀನು ಬಾ ನೀನು ಬರುವುದಿಲ್ಲವಾದರೆ ಸಾಯಿ ಎಂದು ದುಷ್ಪ್ರೇರಿಸುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ಸಾಹುಲ್ ಹಮೀದ್ ನ ವಿರುದ್ಧ ಅ.ಕ್ರ 68/2022 ಕಲಂ:305 IPC & -3 (2)(v), 3(2)(va) The SC & ST (Prevention of Atrocities) Amendment Act 2015 ರಂತೆ ಪ್ರಕರಣ ದಾಖಲಾಗಿದೆ.