ಉಳ್ಳಾಲ: ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್(28) ಎಂಬಾತನನ್ನು ಉಳ್ಳಾಲ ಪೊಲೀಸರ ತಂಡ ಬಂಧಿಸಿದ್ದಾರೆ.
2018 ರ ಜ.13 ರಂದು ಜೆಪ್ಪು ಕುಡ್ಪಾಡಿಯಲ್ಲಿ ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಇಲ್ಯಾಸ್ ನನ್ನು ಆತನ ಫ್ಲಾಟ್ ನಲ್ಲೇ ಹತ್ಯೆ ನಡೆಸಲಾಗಿತ್ತು
ಪ್ರಕರಣ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ದಾವುದ್, ರಿಯಾಝ್ ,ನಾಸಿರ್ ಎಂಬವರನ್ನು ಅಂದೇ ಬಂಧಿಸಲಾಗಿತ್ತು.
ಪ್ರಕರಣ ಸಂಬಂಧಿಸಿ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದ. ಕಳೆದ ಎರಡು ತಿಂಗಳ ಹಿಂದೆ ಉಳ್ಳಾಲ ಉರೂಸ್ ಸಂದರ್ಭ ಆತನನ್ನು ಉಳ್ಳಾಲ ಪೊಲೀಸರು ಹಿಡಿಯಲು ಯತ್ನಿಸಿದ್ದರೂ ಕಾರ್ಯಾಚರಣೆ ಸಫಲವಾಗಿರಲಿಲ್ಲ. ಇದೀಗ ಆರೋಪಿ ಪಂಪ್ವೆಲ್ ಮೂಲಕ ಬೆಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಅವರ ನಿರ್ದೇಶನದಂತೆ ಎಸ್.ಐ. ಪ್ರದೀಪ್ ಹಾಗೂ ಸಿಬ್ಬಂದಿಯಾದ ರಂಜಿತ್, ಚಿದಾನಂದ್, ಹಾಗೂ ಸತೀಶ್ ಆರೋಪಿಯನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.