ಮೈಸೂರು: ಸೆಲ್ಫಿ ತೆಗೆಯಲು ಹೋಗಿ ಗೃಹಿಣಿಯೊಬ್ಬರು ನೀರುಪಾಲಾದ ಘಟನೆ ಪ್ರಸಿದ್ಧ ಯಾತ್ರ ಸ್ಥಳ ಶ್ರೀ ಕ್ಷೇತ್ರ ಸಂಗಮ ಬಳಿ ನಡೆದಿದೆ.
38 ವರ್ಷದ ಕವಿತಾ ಮೃತ ದುರ್ದೈವಿಯಾಗಿದ್ದು, ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ನಿವಾಸಿಯಾಗಿದ್ದರು. ಮೃತ ಕವಿತಾ ಪತಿ ಗಿರೀಶ್ ಹಾಗೂ ಪುತ್ರಿಯೊಂದಿಗೆ ಸಂಗಮ ಕ್ಷೇತ್ರಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದರು.

ದೇವಾಲಯದ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲೇ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ತೆರಳಿದ್ದರು. ಈ ವೇಳೆ ನದಿ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಪಿಲಾ ನದಿಗೆ ಜಾರಿ ಬಿದ್ದು ನಿಧನರಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂದರ್ಭದಲ್ಲಿ ಕವಿತಾ ಬಳಿ ಇದ್ದ ಪತಿ ಗಿರೀಶ್ ಹಾಗೂ ಪುತ್ರಿ ಅವರ ರಕ್ಷಣೆಗೆ ಯತ್ನಿಸಿದರು ಸಾಧ್ಯವಾಗಲಿಲ್ಲ. ಅಲ್ಲದೇ ಎಷ್ಟೇ ಕೂಗಾಡಿ ನೆರವು ನೀಡಲು ಮನವಿ ಮಾಡಿದರೂ ಯಾರು ನೆರವಿಗೆ ಬಾರದ ಪರಿಣಾಮ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಮೃತ ಕವಿತ ಮೈಸೂರು ತಾಲೂಕಿನ ದೂರ ಗ್ರಾಮದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಡಿ.ಬಿ ನಾಗರಾಜ್ ಅವರ ಪುತ್ರಿಯಾಗಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ದಳದಿಂದ ಮೃತ ದೇಹವನ್ನು ಹೊರತೆಗೆದು ಶವಗಾರಕ್ಕೆ ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.