ಬೆಂಗಳೂರು: ಕೊನೆಗೂ ಮತಾಂತರ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸುಗ್ರಿವಾಜ್ಞೆ ಮೂಲಕ ಮತಾಂತರ ಕಾಯ್ದೆ ಜಾರಿಗೆಗೆ ಸರ್ಕಾರ ತೀರ್ಮಾನ ಮಾಡಿದೆ.
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆ ಪಡೆದಿತ್ತು. ಆದರೆ ಪರಿಷತ್ ನಲ್ಲಿ ಬಹುಮತ ಇಲ್ಲದ್ದಕ್ಕೆ ಕಾಯ್ದೆ ಮಂಡನೆಯನ್ನು ಸರ್ಕಾರ ಮುಂದೂಡಿತ್ತು.
ಈ ಬಾರಿ ಬಜೆಟ್ ಅಧೀವೇಶದಲ್ಲಿ ಕೂಡ ಸರ್ಕಾರ ಮಂಡನೆ ಮಾಡಲಿಲ್ಲ. ಆದರೆ ಇದೀಗ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಇಂದು ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಆಧ್ಯಾದೇಶ 2022 ಇದಕ್ಕೆ ಅನುಮೋದನೆ ನೀಡಿದೆ.
ಸಂಪುಟ ಅನುಮೋದನೆ ಪಡೆದು ರಾಜ್ಯಪಾಲರಿಗೆ ಸುಗ್ರಿವಾಜ್ಞೆ ಹೊರಡಿಸುವಂತೆ ಶಿಫಾರಸು ಮಾಡಲಿದೆ. ರಾಜ್ಯಪಾಲರ ಅಂಕಿತದ ಬಳಿಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರುತ್ತದೆ.
ಮತಾಂತರ ತಡೆ ಸುಗ್ರೀವಾಜ್ಞೆ ಹೈಲೈಟ್ಸ್
- ಬಲವಂತದ ಮತಾಂತರ ಜಾಮೀನುರಹಿತ ಅಪರಾಧ ಮತ್ತು ಅಸಿಂಧು.
- ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ.
- ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದು ಅಪರಾಧ.
- ಅಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅಸಿಂಧು ಆಗಲಿದೆ.
- ಈ ಬಗ್ಗೆ ಘೋಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
- ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‍ಜಿಓಗಳು ಪಾಲ್ಗೊಳ್ಳುವಂತಿಲ್ಲ.
- ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸಲಾಗುವುದು.
ದಂಡ ಮತ್ತು ಶಿಕ್ಷೆ
- ಎಸ್‍ಸಿ,ಎಸ್‍ಟಿ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡುವ ಹಾಗಿಲ್ಲ. ಅಪ್ರಾಪ್ತರು, ಮಹಿಳೆಯರು, ಬುದ್ದಿಮಾಂಧ್ಯರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡಬಾರದು. ಕಾಯ್ದೆ ಉಲ್ಲಂಘಿಸಿದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ.
- ಇತರರನ್ನು ಬಲವಂತವಾಗಿ ಮತಾಂತರಿಸಿದ್ದಲ್ಲಿ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ.
- ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
- ಬಲವಂತದ ಮತಾಂತರ ಸಾಭೀತಾದಲ್ಲಿ ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ 5 ಲಕ್ಷ ಪರಿಹಾರ ನೀಡಬೇಕಾಗುತ್ತದೆ.
- ಪರಿಹಾರದ ಮೊತ್ತವನ್ನು ಮತಾಂತರ ಮಾಡಿದವನಿಂದಲೇ ವಸೂಲಿ ಮಾಡಬೇಕಾಗುತ್ತದೆ. ಈ ಹಿಂದೆಯೂ ಮತಾಂತರ ಮಾಡಿದ್ದು ಸಾಭೀತಾದಲ್ಲಿ ದುಪ್ಪಟ್ಟು ದಂಡ ವಿಧಿಸಲಾಗುವುದು.
- ಧರ್ಮ ಬದಲಿಸುವ 60 ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.
- ಮತಾಂತರ ಆಗುವವರು, ಮಾಡುವವರಿಗೆ ಡಿಸಿ, ಪೊಲೀಸ್ ಸಮ್ಮುಖದಲ್ಲಿ ವಿಚಾರಣೆ ಇರುತ್ತದೆ.
- ಶಾಲೆ, ಕಾಲೇಜು ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಡಿಸಿ ಸೂಚಿಸಬೇಕು.
- ಮತಾಂತರಗೊಂಡ ಎಸ್‍ಸಿ, ಎಸ್‍ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ,ಇತರೆ ಸೌಲಭ್ಯ ರದ್ದುಗೊಳಿಸಲಾಗುತ್ತದೆ.