ಕೊಪ್ಪಳ: ಸೇತುವೆ ಮೇಲಿಂದ ಟ್ರ್ಯಾಕ್ಟರ್ ಕೆಳಗೆಬಿದ್ದ ಪರಿಣಾಮ 6 ಜನರು ದುರ್ಮಣ ಹೊಂದಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಕೆಳಗೆಬಿದ್ದು ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಕೆಂಚಪ್ಪ (35), ಮಹಾಂತೇಶ್ (18) ಭರತ್ (01) ಸವಿತಾ (12) ಮಾರೇಶ್ ಹಾಗೂ ಗೌರಮ್ಮ ಎನ್ನುವರು ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಹತ್ತಕ್ಕೂ ಹೆಚ್ಚು ಜನರನ್ನು ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಹುಲಿಗೆಮ್ಮ ಜಾತ್ರೆಗೆ ತೆರಳುತ್ತಿರುವಾಗ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಟ್ಯಾಂಕರ್ ಗುದ್ದಿದೆ. ಪರಿಣಾಮ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಸೇತುವೆ ಮೇಲಿಂದ ಕೆಳಕ್ಕೆ ಬಿದ್ದಿದೆ. ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದವರು ಎಂಬುದು ತಿಳಿದುಬಂದಿದೆ. ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಹೊಸಪೇಟೆ ಮತ್ತು ಕೊಪ್ಪಳ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅಪಘಾತದ ಬಗ್ಗೆ ಕರೆ ಮಾಡಿ ಸಿಎಂ ಜತೆ ಮಾತನಾಡಿದ ಸಂಸದ ತುಕಾರಾಂ, ಅವರ ಒಪ್ಪಿಗೆಯ ಮೇರೆಗೆ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಸಂಸದರ ಅನುದಾನದಡಿ ಪರಿಹಾರ ನೀಡ್ತೇನೆ ಎಂದವರು ತಿಳಿಸಿದ್ದಾರೆ.



























