ಬಂಟ್ವಾಳ: ಕರಾವಳಿಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾರಿಂಜೇಶ್ವರನ ಸನ್ನಿಧಿಯಿಂದ ಬೃಹತ್ ಗಾತ್ರದ ಬಂಡೆ ಇಂದು ಕುಸಿದು ರಸ್ತೆಗೆ ಉರುಳಿದೆ.

ಬೃಹತ್ ಗಾತ್ರದ ಕಲ್ಲುಗಳ ಬುಡ ಸಂದಿಗಳು ಸಡಿಲಗೊಂಡಿದ್ದರಿಂದ ಅನಾಹುತ ನಡೆದಿದೆ. ಇದೇ ರೀತಿ ದೇಗುಲಕ್ಕೆ ಆಧಾರಸ್ಥಂಭವಾಗಿ ನಿಂತಿರುವ ಬಂಡೆಗಳು ಕುಸಿದರೆ ಅನ್ನೋ ಆತಂಕ ಭಕ್ತರನ್ನು ಕಾಡುತ್ತಿದೆ.
ಕಾರಿಂಜೇಶ್ವರ ಕ್ಷೇತ್ರದ ಸುತ್ತಮುತ್ತ ಈ ಹಿಂದೆ ನಡೆಯುತ್ತಿದ್ದ ಗಣಿಕಾರಿಕೆಯ ಸ್ಫೋಟದ ಪರಿಣಾಮದಿಂದ ಈ ರೀತಿ ಬಂಡೆ ಕುಸಿದಿರಬಹುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಕಾರಿಂಜ ಸುತ್ತಮುತ್ತಲಿನ ಗಣಿಗಾರಿಕೆಯನ್ನು ನಿಲ್ಲಿಸಲು ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿದ್ದು, ಈ ಹಿಂದೆ ನಡೆಯುತ್ತಿದ್ದ ಗಣಿಗಾರಿಕೆಯ ಸ್ಫೋಟದ ಪರಿಣಾಮದಿಂದಾಗಿ ಈ ರೀತಿ ಅನಾಹುತ ಸಂಭವಿಸಿದೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು, ಗಣಿಗಾರಿಕೆ ಪೂರ್ಣ ಪ್ರಮಾಣದ ಕಡಿವಾಣ ಹಾಕುವ ಮೂಲಕ, ಇತಿಹಾಸ ಪ್ರಸಿದ್ಧ ದೇವಾಲಯ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ. ಇಲ್ಲವಾದರೆ ಮತ್ತೊಮ್ಮೆ ಹೋರಾಟಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.