ಮೈಸೂರು: ಅದ್ದೂರಿಯಾಗಿ ನಡೆಯುತ್ತಿರುವ ವಿವಾಹ, ಇನ್ನೇನು ತಾಳಿ ಕಟ್ಟಬೇಕು ಎಂದಾಗ ಎದ್ದು ನಿಲ್ಲುವ ವಧು ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳುವ ದೃಶ್ಯಗಳನ್ನು ನೀವು ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ನೋಡಿರಬಹುದು. ಆದರೆ ಇಂತಹುದೇ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿಯ ಯುವತಿಗೆ ಹೆಚ್.ಡಿ ಕೋಟೆ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ನಿಶ್ಚಯವಾಗಿತ್ತು. ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಇಂದು ಅದ್ಧೂರಿಯಾಗಿ ಮದುವೆ ನಡೆಯುತ್ತಿತ್ತು. ಆದರೆ ತಾಳಿ ಕಟ್ಟಬೇಕು ಎಂಬ ಸಮಯದಲ್ಲಿ ವಧು ಕುಸಿದು ಬಿದ್ದಿದ್ದಾಳೆ.
ಆದರೆ ವಧು ಅನಾರೋಗ್ಯದಿಂದ ಕುಸಿದು ಬಿದ್ದಿರಲಿಲ್ಲ. ಮದುವೆ ಮುರಿಯುವ ಉದ್ದೇಶದಿಂದ ಕೊನೆ ಕ್ಷಣದಲ್ಲಿ ಆಕೆ ಹೈಡ್ರಾಮಾ ಆರಂಭಿಸಿದ್ದಳು. ಕುಸಿದು ಬಿದ್ದಂತೆ ನಟಿಸಿದ ವಧು, ‘ತಾನು ನಿಶ್ಚಯವಾದ ವರನನ್ನು ವಿವಾಹವಾಗಲಾರೆ, ತನ್ನ ಲವರ್ ನನ್ನೇ ಮದುವೆಯಾಗುತ್ತೇನೆಂದು’ ವರಸೆ ಆರಂಭಿಸಿದ್ದಾಳೆ.

ಅಂದಹಾಗೆ ಈ ಯುವತಿಗೆ ಮದುವೆ ನಿಶ್ಚಯವಾಗಿದ್ದರೂ ಸುಣ್ಣದಕೇರಿಯಲ್ಲೇ ಪಕ್ಕದ ಮನೆಯವನೊಂದಿಗೆ ಲವ್ವಿಡವ್ವಿ ಇಟ್ಟುಕೊಂಡಿದ್ದಳು. ಹೆಚ್.ಡಿ ಕೋಟೆಯ ಯುವಕನೊಂದಿಗೆ ಮದುವೆ ಫಿಕ್ಸ್ ಆದ ಬಳಿಕ ಯುವತಿಯ ಪ್ರಿಯಕರನಿಂದ ವರನಿಗೆ ಮದುವೆಯಾಗದಂತೆ ಮೆಸೇಜ್ ಕೂಡಾ ಬಂದಿತ್ತು. ಆದರೆ ಮಸೇಜ್ ಗೂ ನನಗೂ ಸಂಬಂಧವಿಲ್ಲ ಎಂಬಂತೆ ಯುವತಿ ಮ್ಯಾನೇಜ್ ಮಾಡಿದ್ದಳು.
ಇಷ್ಟೆಲ್ಲಾ ಇದ್ದರೂ ಯಾರಿಗೂ ಹೇಳದ ಯುವತಿ ಮದುವೆಯವರೆಗೂ ಸುಮ್ಮನಿದ್ದಳು. ಆದರೆ ತಾಳಿ ಕಟ್ಟುವ ವೇಳೆ ಮದುವೆಗೆ ನೋ ಎಂದ ವಧು ಹೈಡ್ರಾಮವನ್ನೇ ನಡೆಸಿದ್ದಾಳೆ.
ವಧುವಿಗೆ ಛೀಮಾರಿ:
ತಮ್ಮೆದುರೇ ನಡೆದ ಇಷ್ಟೆಲ್ಲಾ ಘಟನೆ ಕಂಡು ವರನ ಪೋಷಕರು ವಧುವಿಗೆ ಛೀಮಾರಿ ಹಾಕಿದ್ದಾರೆ. ಮದುವೆಗಾಗಿ ವರನ ಪೋಷಕರು ಸುಮಾರು ಐದು ಲಕ್ಷ ಹಣ ಖರ್ಚು ಮಾಡಿದ್ದರು. ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ಲಕ್ಷ ಖರ್ಚು ಮಾಡಿದ್ದರು.
ಮದುವೆಯಾಗುವುದಿಲ್ಲವೆಂದು ಹಠ ಹಿಡಿದ ವಧುವನ್ನು ಕೆ.ಆರ್ ಠಾಣೆ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.