ಪುತ್ತೂರು: ಪ್ರತಿಷ್ಠಿತ ಐಎಮ್‌ಕೆಎಸ್‌ಬಿ ಡಾಕ್ಟರ್ ಡೇ ಪ್ರಶಸ್ತಿ ಪುರಸ್ಕೃತರಾಗಿರುವ ಪುತ್ತೂರಿನ ಖ್ಯಾತ ವೈದ್ಯ ಡಾ.ಎಮ್.ಕೆ.ಪ್ರಸಾದ್ ಅವರಿಗೆ ‘ಮುತ್ತಿನ ನಗರಿಯ ಹಿಂದೂ ಹೃದಯ ಸಾಮ್ರಾಟ್’ ಅಭಿವಂದನಾ ನಾಗರಿಕ ಸನ್ಮಾನ ಕಾರ್ಯಕ್ರಮವು ಡಾ.ಎಮ್.ಕೆ.ಪ್ರಸಾದ್ ಅಭಿನಂದನಾ ವೇದಿಕೆ ವತಿಯಿಂದ ಜು.14 ರಂದು ಸಂಜೆ 5 ಗಂಟೆಗೆ ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ನಡೆಯಲಿದೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸಾಲ್ಮರ ಜಂಕ್ಷನ್‌ನಿಂದ ಡಾ.ಎಂ.ಕೆ.ಪ್ರಸಾದ್ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ಬಳಿಕ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಅಭಿವಂದನಾ ವೇದಿಕೆ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಶ್ರೀ ವೇ.ಮೂ.ಕುಂಟಾರು ರವೀಶ ತಂತ್ರಿ ಅಭಿವಂದನಾ ಮಾತುಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಹಿಂಜಾವೇ ಕರ್ನಾಟಕ ಪ್ರಾಂತ ಪ್ರಶಿಕ್ಷಣ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ, ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್, ಹಿರಿಯ ವೈದ್ಯೆ ಡಾ.ಗೌರಿ ಪೈ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ.ಕೊಟೇಚಾ ಉಪಸ್ಥಿತರಿರಲಿದ್ದಾರೆ.
ಡಾ.ಎಂ.ಕೆ.ಪ್ರಸಾದ್ ಅವರಿಗೆ ಹಾರಾರ್ಪಣೆ, ಸನ್ಮಾನಿಸಲು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೂ ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.



























