ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಚಾರ್ಮಾಡಿ ರಸ್ತೆಯ ಟೈಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆಯೊಂದು ವರದಿಯಾಗಿದೆ.
ಜೊತೆಗೆ ಅದರ ಪಕ್ಕದಲ್ಲೇ ಇರುವ ಹೋಟೆಲ್, ಹಾರ್ಡ್ ವೇರ್ ಅಂಗಡಿಗೂ ಕೂಡಾ ಬೆಂಕಿ ತಗುಲಿದ್ದು, ಹೊತ್ತಿ ಉರಿದಿದೆ.
ಅವಘಡದಿಂದಾಗಿ ಘಟನಾ ಸ್ಥಳದಲ್ಲಿ ಜನಸ್ತೋಮವೇ ನೆರೆದಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.
ಸ್ಥಳೀಯರ ಪ್ರಕಾರ ಶಾರ್ಟ್ ಸರ್ಕ್ಯೂಟ್ ಆಗಿರುವ ಸಂಭವ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.