ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದೆಂದು ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿಗಳಾದ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದಗಿರಿ ಸ್ವಾಮೀಜಿ , ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೇರಿದಂತೆ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಜಿಎಸ್‍ಟಿಟಿ ವೆಚ್ಚ , ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1,300 ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ. ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ನೀಡುತ್ತಿರುವ ದೇಣಿಗೆಯೂ ಹರಿದು ಬರುತ್ತಿದೆ. ತಿಂಗಳಿಗೆ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ದೇಣಿಗೆ ಬರುತ್ತಿದ್ದು, ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದೆ.
ಈ ತನಕದ ಸುಮಾರು 300 ಕೋಟಿ ಖರ್ಚನ್ನು ಭಕ್ತರಿಂದ ಹರಿದು ಬರುತ್ತಿರುವ ದೇಣಿಗೆಯಿಂದಲೇ ನಿರ್ವಹಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಆರಂಭದ ದೇಣಿಗೆ ಸಂಗ್ರಹ ಅಭಿಯಾನದಿಂದ ಬಂದ ಸಾವಿರ ಕೋಟಿಗೂ ಮೀರಿದ ಮೂಲಧನದ ನಿರ್ವಹಣೆ ಮಾಡಬೇಕಾದ ಕುರಿತಾಗಿಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.