ಪುತ್ತೂರು: ಫೈನಾನ್ಸ್ ವೊಂದರಿಂದ ವಾಹನ ಖರೀದಿಸಲು ಪಡೆದುಕೊಂಡಿದ್ದ ಸಾಲಕ್ಕೆ ಸಂಬಂಧಿಸಿ ನೀಡಿದ್ದ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಅಪರಾಧಿಯಾಗಿ ತಲೆಮರೆಸಿಕೊಂಡಿದ್ದಾತನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಸಂಸ್ಥೆಯಿಂದ ವಾಹನ ಖರೀದಿಸಲು ಹಸನಬ್ಬ ಮಂಗಳೂರು ಸಾಲ ಪಡೆದುಕೊಂಡಿದ್ದು, ಸಾಲ ಮರುಪಾವತಿಗಾಗಿ 5,75,000 ರೂ.ಗೆ ಕರ್ಣಾಟಕ ಬ್ಯಾಂಕ್‌ನ ಚೆಕ್ ನೀಡಿದ್ದರು. ಚೆಕ್ ಅಮಾನ್ಯಗೊಂಡಿದ್ದರಿಂದಾಗಿ ಸಂಸ್ಥೆಯು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ನ್ಯಾಯಾಲಯ ಆರೋಪಿ ಹಸನಬ್ಬ ದೋಷಿಯೆಂದು ತೀರ್ಪು ನೀಡಿ 5,75,000 ರೂ. ಅನ್ನು ದೂರುದಾರ ಸಂಸ್ಥೆಗೆ ಪಾವತಿಸುವಂತೆಯೂ, ತಪ್ಪಿದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿತ್ತು. ತೀರ್ಪಿಗೆ ಸಂಬಂಧಿಸಿ ಮೇಲ್ಮನವಿ ಸಲ್ಲಿಸಲು ಅಪರಾಧಿಗೆ ಅವಕಾಶವಿದ್ದರೂ, ಮೇಲ್ಮನವಿ ಸಲ್ಲಿಸದೆ ತಲೆಮರೆಸಿಕೊಂಡಿದ್ದ.
ಮೇಲ್ಮನವಿ ದಿನಾಂಕ ಮುಗಿದ ಹಿನ್ನಲೆಯಲ್ಲಿ ಪೊಲೀಸರು ಅಪರಾಧಿಯನ್ನು ಫರಂಗಿಪೇಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಅಪರಾಧಿಗೆ ನ್ಯಾಯಾಂಗ ಬಂಧನ ವಿಧಿಸಿದೆ.