ನವದೆಹಲಿ: ಅಕ್ಟೋಬರ್ 1 ರಂದು ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಟ್ವೀಟ್ ಮಾಡಿದೆ.
ಏಷ್ಯಾದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಇಂಡಿಯಾ ಮೊಬೈಲ್ ಕಾಂಗ್ರೆಸ್, ದೂರ ಸಂಪರ್ಕ ಇಲಾಖೆ ಹಾಗೂ ಸೆಕ್ಯೂಲರ್ ಆಪರೇಟರ್ಸ್ ಸೋಸಿಯೇಷನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಅನಾವರಣಗೊಳ್ಳಲಿದ್ದು, ಈ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.
ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ಶೇ.80 ಪ್ರತಿಶತದಷ್ಟು 5ಜಿ ಸೇವೆ ತಲುಪಿಸುವ ಗುರಿ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಅನೇಕ ದೇಶಗಳು ಶೇ.40 – 50 ಪ್ರತಿಶತದಷ್ಟು ಗುರಿ ತಲುಪುವುದಕ್ಕೇ ಹಲವು ವರ್ಷಗಳನ್ನು ತೆಗೆದುಕೊಂಡಿವೆ. ಆದರೆ ನಾವು ಟೈಮ್‌ಲೈನ್ ಗುರಿಯಾಗಿಸಿಕೊಂಡಿದ್ದು, ಕೇಂದ್ರ ಸರ್ಕಾರವೂ ನಿರ್ದಿಷ್ಟ ಗುರಿ ನೀಡಿದೆ. ಹಾಗಾಗಿ ನಾವು ಶೇ.80 ಪ್ರತಿಶತದಷ್ಟನ್ನು ತಲುಪಬೇಕು ಎಂದು ಹೇಳಿದ್ದಾರೆ.
ಈಗಾಗಲೇ 5ಜಿ ಸೇವೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದು 2023 – 2024ರ ನಡುವೆ ಭಾರತಕ್ಕೆ 36.4 ಟ್ರಿಲಿಯನ್ ರೂ.ಗೆ ಆದಾಯ ವೃದ್ಧಿಸುವ ಸಾಧ್ಯತೆಯಿದೆ ಎಂದು ಇತ್ತೀಚಿನ ಜಾಗತಿಕ ಉದ್ಯಮ ಸಂಸ್ಥೆಗಳ ವರದಿ ಅಂದಾಜಿಸಿದೆ.
5ಜಿ ಸೇವೆ ಎಲ್ಲಿ ಸಿಗುತ್ತೆ..!??
2022ರ ಅಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಆರಂಭದಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.
