ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಸೆ.26) ವಿಧ್ಯುಕ್ತ ಚಾಲನೆ ನೀಡಿದರು.
ದೀಪ ಬೆಳಗಿ ಬೆಳ್ಳಿರಥದಲ್ಲಿ ಮಹಿಷಾಸುರಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾದವು.
ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಲೆಂದು ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಕುಂಕುಮಾರ್ಚನೆಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ಉಪಸ್ಥಿತರಿದ್ದರು. ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಆಯ್ದ ಕೆಲ ಗಣ್ಯರಿಗೆ ಮಾತ್ರ ರಾಷ್ಟ್ರಪತಿ ಜೊತೆ ವೇದಿಕೆ ಮೇಲೆ ಅವಕಾಶ ನೀಡಲಾಗಿದೆ.