ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭೇಟಿ ನೀಡಿದ್ದು, ಸೋಗಾನೆಯಲ್ಲಿ 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ಮಲೆನಾಡು ಭಾಗದ ಬಹುಕಾಲದ ಕನಸಾದ ಶಿವಮೊಗ್ಗದ ಏರ್ ಪೋರ್ಟ್ ಲೋಕಾರ್ಪಣೆಯಾಗಿದೆ.
ನವದೆಹಲಿಯಿಂದ ಸೇನಾ ವಿಮಾನದಲ್ಲಿ ಬಂದ ಮೋದಿಯವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿದರು.ಈ ವೇಳೆ ಪ್ರಧಾನಿ ಮೋದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಹಲವರು ಸ್ವಾಗತ ಕೋರಿದರು.
ವಿಮಾನ ನಿಲ್ದಾಣವನ್ನು ಮೋದಿಯವರು ಉದ್ಘಾಟನೆ ಮಾಡಿ, ಸಮಾರಂಭ ವೇದಿಕೆಯಲ್ಲಿ ಮೋದಿಯವರಿಗೆ ಶಾಲು ಹೊದಿಸಿ ಈಶ್ವರಪ್ಪ ಅವರು ಸನ್ಮಾನಿಸಿದರು. ಬಳಿಕ ಮೋದಿಯವರಿಗೆ ವಿಶೇಷ ಪೇಟ ತೊಡಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಶಿವಮೊಗ್ಗ ಏರ್ಪೋರ್ಟ್ ಕಲಾಕೃತಿಯನ್ನು ಕಾಣಿಕೆ ನೀಡಿದರು.
ರಾಜ್ಯದ 2ನೇ ಅತಿ ದೊಡ್ಡ ಏರ್ ಪೋರ್ಟ್ ಎಂಬ ಹೆಗ್ಗಳಿಕೆ ಪಡೆದ ಶಿವಮೊಗ್ಗ ಏರ್‌ಪೋರ್ಟ್, ಒಟ್ಟು 775 ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣವಾಗಿದೆ. 449.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 3.2 ಕಿ.ಮೀ ರನ್ ವೇ ಹೊಂದಿದ್ದು, ಎಟಿಆರ್ ಸೇರಿದಂತೆ ಎಲ್ಲಾ ರೀತಿಯ ವಿಮಾನಗಳು ಲ್ಯಾಂಡಿಗ್ ಆಗಲಿವೆ. 4320 ಚದರಡಿ ವಿಸ್ತಿರ್ಣದ ಸುಸಜ್ಜಿತ ಪ್ಯಾಸೆಂಜರ್ ಟರ್ಮಿನಲ್ ಹಾಗೂ ವಿಮಾನ ನಿಲ್ದಾಣದ ಸುತ್ತ 15,900 ಮೀಟರ್ ಉದ್ದದ ಕಾಂಪೌಂಡ್ ಇದೆ.