ಪಡಂಗಡಿ: ಇಲ್ಲಿನ ಸಮೀಪ ಪಲ್ಗುಣಿ ನದಿಯ ಮಾಂತ್ರಾಯಿ ಗುಂಡಿ ಯಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿದ ಘಟನೆ ಮೇ.6ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಮಗ ನಿಶಾಂತ್ (22) ಎಂದು ಗುರುತಿಸಲಾಗಿದ್ದು, ಈತ ಮತ್ತು ಈತ 5 ಜನ ಸ್ನೇಹಿತರು ಸ್ಥಳೀಯ ಹೊಳೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.
ವಿಪರ್ಯಾಸವೆಂದರೆ ನಿಶಾಂತ್ ಗೆ ಮಾತ್ರ ತಂಡದಲ್ಲಿ ಚೆನ್ನಾಗಿ ಈಜಲು ಬರುತ್ತಿತ್ತು. ಹೊರತುಪಡಿಸಿ ಉಳಿದವರು ಈಜುವಿಕೆಯಲ್ಲಿ ಈತನಷ್ಟು ಶಕ್ತರಿರಲಿಲ್ಲ..ಗೆಳೆಯನನ್ನು ಸೊಂಟದಲ್ಲಿ ಹಿಡಿದು ಹಿಂದೆ ಎಳೆದಿದ್ದು, ಕಾಪಾಡಲು ಪ್ರಯತ್ನಿಸಿದ್ದು ಕಡೆಗೆ ಒಬ್ಬನೇ ಉಳಿದ ನಿಶಾಂತ್ ನೀರಿನ ಕೆಸರಿನ ಮಧ್ಯೆ ಯಾವುದೂ ಸರಿಯಾಗಿ ಗೋಚರಿಸದೆ ನೀರಿನಾಳಕ್ಕೆ ಇಳಿದು ಅರ್ಧದಲ್ಲಿ ಉಸಿರುಗಟ್ಟಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿದ್ದು, ದಡಕ್ಕೆ ತಂದಿದ್ದಾರೆ. ಅಲ್ಲದೇ ಗೆಳೆಯನನ್ನು ಉಳಿಸಿಕೊಳ್ಳಬೇಕೆಂಬ ಹಠದಿಂದ ಚಿಕಿತ್ಸೆಗಾಗಿ ಸ್ಥಳಕ್ಕೆ ಅಂಬುಲೆನ್ಸ್ ಅನ್ನು ಬರ ಮಾಡಿಕೊಂಡಿದ್ದರು. ಆದರೆ ದುರಾದೃಷ್ಟವಶಾತ್ ಆ ವೇಳೆಗಾಗಲೇ ನಿಶಾಂತ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರೀಡಾ
ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಬಳಂಜ ವಾಲಿಬಾಲ್ ಕ್ಲಬ್ ನ ಸದಸ್ಯರಾಗಿದ್ದರು.
ಎಲ್ಲರ ಜತೆ ಬೆರೆಯುತ್ತಿದ್ದ ಯುವಕ ನಿನ್ನೆ ತನ್ನದೇ ಊರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡಾ ಭಾರೀ ಸಂತೋಷದಿಂದ ಪಾಲ್ಗೊಂಡು ಕುಣಿದಾಡಿದ್ದ.. ಆದರೆ ವಿಧಿ ನಿಯಮ ಇವತ್ತಿಗೇ ಆ ನೆನಪನ್ನು ಸೃಷ್ಟಿಸಿ ಎಲ್ಲರ ಕಂಬನಿಗೆ ಕಾರಣವಾಗಿದೆ.